ಯಾದಗಿರಿ: ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆ ಪ್ರಗತಿ ಪರಿಶೀಲನಾ ಸಭೆ

Update: 2025-01-09 16:10 GMT

ಯಾದಗಿರಿ: ಪ್ರಸಕ್ತ ಆರ್ಥಿಕ ಸಾಲಿಗೆ ಆಯಾ ಇಲಾಖೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಎಸ್.ಸಿ.ಪಿ.,ಟಿ.ಎಸ್.ಪಿ. ಯೋಜನೆಯಡಿ ನೀಡಲಾದ ಅನುದಾನವನ್ನು ಮಾರ್ಚ್ ಅಂತ್ಯದವರೆಗೆ ಕಾಯದೆ ಕಾಲಮಿತಿಯಲ್ಲಿ ಖರ್ಚು ಮಾಡಿ, ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ. ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಎಸ್.ಸಿ.ಎಸ್.ಪಿ,ಟಿ.ಎಸ್.ಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವ ಬದಲು, ಅಯಾ ಮಾಹೆಗೆ ಅನುಗುಣವಾಗಿ ಕಾಲಮಿತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದರು.

ಎಸ್.ಸಿ.ಪಿ,ಟಿ.ಎಸ್.ಪಿ ಅನುದಾನ ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ನೀಡಲಾದ ಅನುದಾನ ಆ ಸಮುದಾಯ ಜನ ಕಲ್ಯಾಣಕ್ಕೆಯೇ ಬಳಸಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ನಿಗಮದಿಂದ‌ ಭೂ ಒಡೆತನ ಯೋಜನೆಯಡಿ ಅರ್ಹರಿಗೆ ಜಮೀನು ಹಂಚಿಕೆ ಮಾಡಬೇಕು. ಸಾಲ ಮಂಜೂರಾತಿಗೆ ನಿಗಮಗಳು ಅನಗತ್ಯ ದಾಖಲೆ ಕೇಳಿ ಫಲಾನುಭವಿಗಳನ್ನು ಕಚೇರಿಗೆ ಅಲೆದಾಡಿಸಬಾರದು. ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲು ಈಗಾಗಲೆ ಟೆಂಡರ್ ಕರೆದಿದ್ದರಿಂದ, ಅರ್ಹ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೊಲಿಗೆ ಯಂತ್ರ ವಿತರಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಚೆನ್ನಬಸಪ್ಪ ಅವರು ಮಾತನಾಡಿ, ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಗೆ ವಿಶೇಷ ಘಟಕ ಯೋಜನೆ ಮೂರನೇ ತ್ರೈಮಾಸಿಕ ಅಂತ್ಯದ ವರೆಗೆ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ-ಗಿರಿಜನ ಉಪ ಯೋಜನೆಯಡಿ ಇಲಾಖಾವಾರು ಸಾಧಿಸಿದ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವಿವರ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕ ರಾಜು ದೇಖಮುಖ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News