ಯಾದಗಿರಿ | ಪತ್ರಕರ್ತರ ಬದುಕಿನ ಆಸರೆಗಾಗಿ ಸಹಕಾರ ಸಂಘ ಆರಂಭಿಸಲಾಗುವುದು : ಮಲ್ಲಪ್ಪ ಸಂಕೀನ್

ಸುರಪುರ : ಪತ್ರಕರ್ತರು ತಮ್ಮ ಕೆಲಸದ ಒತ್ತಡಗಳ ಮಧ್ಯೆ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಾರೆ. ಪತ್ರಕರ್ತರ ಬದುಕಿಗಾಗಿ ಆರ್ಥಿಕ ನೆರವು ಸಿಗಲಿ ಎನ್ನುವ ಉದ್ದೇಶ ದಿಂದ ಜಿಲ್ಲಾ ಪತ್ರಕರ್ತರ ಸಹಕಾರ ಸಂಘವನ್ನು ಆರಂಭಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಕ ಪತ್ರಕರ್ತರು ತಮ್ಮ ಬದುಕಿನಲ್ಲಿ ಆರ್ಥಿಕ ಸಂಕಷ್ಟವನ್ನು ಅನುಭವಿಸುವವರೇ ಆಗಿರುತ್ತಾರೆ. ಅಲ್ಲದೆ ಪತ್ರಕರ್ತರಿಗೆ ಬ್ಯಾಂಕ್‌ಗಳಾಗಲಿ, ಖಾಸಗಿ ಹಣಕಾಸು ಸಂಸ್ಥೆಗಳಾಗಲಿ ಸಾಲ ನೀಡಲು ಹಿಂದೇಟು ಹಾಕುತ್ತವೆ. ಆದರೆ ಇಂದಿನ ದುಬಾರಿ ದಿನಗಳಲ್ಲಿ ಪ್ರತಿ ಪತ್ರಕರ್ತನ ಕುಟುಂಬಕ್ಕೆ ಆರ್ಥಿಕ ಚೇತರಿಕೆ ಎನ್ನುವುದು ತುಂಬಾ ಅಗತ್ಯವಾಗಿದೆ. ಅಲ್ಲದೆ ಕಳೆದ 15 ವರ್ಷಗಳಿಂದ ಪತ್ರಕರ್ತರ ಸಹಕಾರ ಸಂಘ ಆರಂಭಿಸುವ ಕುರಿತು ಚಿಂತನೆ ಇತ್ತು, ಅದಕ್ಕೆ ಈಗ ಕಾಲ ಕೂಡಿಬಂದಂತಿದೆ. ಈಗಾಗಲೇ ಸಹಕಾರ ಇಲಾಖೆಯೂ ಸಹಕಾರ ಸಂಘ ಆರಂಭಿಸಲು ಒಪ್ಪಿಗೆ ನೀಡಿದ್ದು, ಜಿಲ್ಲೆಯ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಸದಸ್ಯರ ನೆರವಿನೊಂದಿಗೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಿಗಿ ಮಾತನಾಡಿ, ಮಲ್ಲಪ್ಪ ಸಂಕೀನ್ ಅವರು ಅಧ್ಯಕ್ಷರಾದ ನಂತರ ಅನೇಕ ಉಪಯುಕ್ತ ಯೋಜನೆಗಳನ್ನು ಆರಂಭಿಸಿ ಮಾದರಿಯಾಗಿದ್ದಾರೆ. ಈಗ ಸಹಕಾರ ಸಂಘವನ್ನು ಆರಂಭಿಸಲು ಮುಂದಾಗಿರುವುದು ಜಿಲ್ಲೆಯ ನಮ್ಮೆಲ್ಲ ಪತ್ರಕರ್ತರಿಗೆ ತುಂಬಾ ಸಂತೋಷ ಮೂಡಿಸಿದೆ. ನಾವೆಲ್ಲರು ಬೆಂಬಲಿಸಿ ನರವಾಗುವ ಮೂಲಕ ಎಲ್ಲರ ಏಳಿಗೆಗೆ ಸಹಕಾರ ನಿಡೋಣ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಗುಂಡಾಭಟ್ಟ ಜೋಷಿ,ಸಂಘದ ಸುರಪುರ ತಾಲೂಕು ಅಧ್ಯಕ್ಷ ಶ್ರೀಕರ ಭಟ್ ಜೋಷಿ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಶಾಲ ದೋರನಗಳಲ್ಲಿ ಉಪಸ್ಥಿತರಿದ್ದರು. ಸುರಪುರ ತಾಲೂಕಿನ ನಗರ, ಕೆಂಭಾವಿ ಹಾಗೂ ಕಕ್ಕೇರಾದ ಅನೇಕ ಜನ ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಂಘದ ತಾ.ಪ್ರ. ಕಾರ್ಯದರ್ಶಿ ಕ್ಷೀರಲಿಂಗಯ್ಯ ಬೋನ್ಹಾಳ ಸಭೆಯನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸುರಪುರ ತಾಲೂಕು ಅಧ್ಯಕ್ಷ ಶ್ರೀಕರ ಭಟ್ ಜೋಷಿ ಅವರಿಗೆ ಜಿಲ್ಲಾ ಘಟಕದಿಂದ ಅಧ್ಯಕ್ಷ ಮಲ್ಲಪ್ಪ ಸಂಕೀನ್, ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಿಗಿ ಇತರರು ಸನ್ಮಾನಿಸಿ ಗೌರವಿಸಿದರು.