40 ಸಾವಿರ ಕೋಟಿ ರೂ. ಹಗರಣದ ಬಗ್ಗೆ ವಿಜಯೇಂದ್ರ ಉತ್ತರ ನೀಡುವುದು ಯಾವಾಗ?: ಕಾಂಗ್ರೆಸ್

Update: 2024-01-09 12:34 GMT

ಬೆಂಗಳೂರು: ಕೋವಿಡ್ ಸೋಂಕಿತರ ಶವದ ಮೇಲೆ ಭ್ರಷ್ಟಾಚಾರದ ಮಹಲ್ ಕಟ್ಟಿದ ಬಿ.ವೈ. ವಿಜಯೇಂದ್ರ 40 ಸಾವಿರ ಕೋಟಿ ರೂ. ಮೊತ್ತದ ಹಗರಣದ ಆರೋಪದ ಬಗ್ಗೆ ಉತ್ತರ ನೀಡುವುದು ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮಂಗಳವಾರ ಈ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದ ವಿಡಿಯೋ ಅನ್ನು ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, 40 ಸಾವಿರ ಕೋಟಿ ರೂ.ಗಳ ಕೋವಿಡ್ ಹಗರಣದ ಮತ್ತಷ್ಟು ಸಂಗತಿಗಳು ಬಿಜೆಪಿಯ ಹಿರಿಯ ನಾಯಕರಿಂದಲೆ ಬಯಲಾಗಿವೆ ಎಂದು ತಿಳಿಸಿದೆ.

ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, ನಿಮ್ಮವರೇ ಮಾಡಿದ ಬೃಹತ್ ಮೊತ್ತದ ಹಗರಣದ ಆರೋಪದ ಬಗ್ಗೆ ತುಟಿ ಬಿಚ್ಚಲು ಭಯಪಡುತ್ತಿರುವುದೇಕೆ?. ಕೋವಿಡ್ ಸೋಂಕಿತರ ಶವದ ಮೇಲೆ ಭ್ರಷ್ಟಾಚಾರದ ಮಹಲ್ ಕಟ್ಟಿದ ತಾವು ಈ ಬಗ್ಗೆ ಉತ್ತರ ನೀಡುವುದೆಂದು? ಎಂದು ಕಾಂಗ್ರೆಸ್ ಕೇಳಿದೆ.

ಹಿಂದೆ ನಾವು ಕೋವಿಡ್ ಹಗರಣದ ಬಗ್ಗೆ ದನಿ ಎತ್ತಿದಾಗ ಹಗರಣ ನಡೆದೇ ಇಲ್ಲ ಎಂದು ವಾದಿಸಿದ್ದರು ರಾಜ್ಯ ಬಿಜೆಪಿ ನಾಯಕರು. ಈಗ ಅವರದ್ದೆ ಪಕ್ಷದ ನಾಯಕರು ಅಕ್ರಮವನ್ನು ಬಿಚ್ಚಿಟ್ಟಿದ್ದಾರೆ. ಅಂದಿನ ಶ್ಯಾಡೋ ಸಿಎಂ ಆಗಿದ್ದ ವಿಜಯೇಂದ್ರ ಈ ಗೋಲ್ಮಾಲ್ ನ ರೂವಾರಿ ಎಂದು ಬೆಟ್ಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಹಿಮಾಚಲ ಪ್ರದೇಶದ ಸರಕಾರ ಕೋವಿಡ್ ಕಿಟ್ ಗೆ 1.30 ಲಕ್ಷ ರೂ.ಗಳಿಗೆ ಖರೀದಿಸಿದರೆ ಕರ್ನಾಟಕ ಸರಕಾರ 2.90 ಲಕ್ಷಕ್ಕೆ ಖರೀದಿಸಿದೆ. ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಸೇರಿದ್ದರಿಂದ ಇಷ್ಟು ದುಬಾರಿ ಆಯಿತೆ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ನಮ್ಮ ಸರಕಾರ ಕೋವಿಡ್ ಹಗರಣವನ್ನು ತನಿಖೆ ನಡೆಸಲು ಸಮರ್ಥರ ಸಮಿತಿ ರಚಿಸಿದೆ ಎಂದು ತಿಳಿಸಿದೆ.

ಆದರೆ ಈಗ ಬಿಜೆಪಿಯ ಹಿರಿಯ ನಾಯಕರು ಹಲವು ಸಂಗತಿಗಳನ್ನು ಜನರ ಮುಂದಿಟ್ಟಿದ್ದಾರೆ, ರಾಜ್ಯ ಬಿಜೆಪಿ ಹಾಗೂ ಬಿ.ವೈ.ವಿಜಯೇಂದ್ರ ರಾಜ್ಯದ ಜನತೆಗೆ ತಾವು ಉತ್ತರದಾಯಿಗಳು ಎನ್ನುವ ಅರಿವು ಇದ್ದರೆ, ಜನತೆಗೆ ಈ ಆರೋಪಗಳ ಬಗ್ಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಆರೋಪಗಳು ನೇರವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿದೆ, ಹೀಗಿದ್ದೂ ವಿಜಯೇಂದ್ರ ಮಾತನಾಡದಿರುವುದೇಕೆ? ಈ ಹಗರಣದಲ್ಲಿ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಪಾತ್ರವಹಿಸಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News