ಜ. 11 - 12: ಏಳನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್
ಮಂಗಳೂರು, ಜ.8: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗುವ 7ನೇ ಆವೃತ್ತಿಯು ಮಂಗಳೂರು ಸಾಹಿತ್ಯೋತ್ಸವ ‘ಮಂಗಳೂರು ಲಿಟ್ ಫೆಸ್ಟ್ ’ ನಗರದ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜ. 11 ಮತ್ತು 12 ರಂದು ನಡೆಯಲಿದೆ ಎಂದು ಭಾರತ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಡಿನ ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಮಂಗಳೂರು ಲಿಟ್ ಫೆಸ್ಟ್‌ನ್ನು ಉದ್ಘಾಟಿಸುವರು ಎಂದು ವಿವರಿಸಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಮಾಜಿ ಗುಪ್ತಚರ ಮುಖ್ಯಸ್ಥ ವಿಕ್ರಮ್ ಸೂದ್, ಶತಾವಧಾನಿ ಡಾ. ಆರ್. ಗಣೇಶ್ , ಮಾಜಿ ಭಾರತೀಯ ರಾಜತಾಂತ್ರಿಕ ಮತ್ತು ಲೇಖಕ ದಿಲೀಪ್ ಸಿನ್ಹಾ, ಮಾಜಿ ಪೊಲೀಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ಇತಿಹಾಸಕಾರ ಹಾಗೂ ಲೇಖಕ ಡಾ. ವಿಕ್ರಮ್ ಸಂಪತ್, ಜೆಎನ್‌ಯು ಉಪಕುಲಪತಿ ಡಾ. ಶಾಂತಿಶ್ರೀ ದುಲಿಪುಡಿ ಪಂಡಿತ್, ಸ್ವಾಮಿ ಮಹಾಮೀಧಾನಂದ, ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಹಿಮಾಲಯ ಭೌಗೊಳಿಕ ರಾಜಕೀಯ ತಜ್ಞ ಡಾ. ಕ್ಲಾಡ್ ಅರ್ಪಿ, ರಾಜಕೀಯ ವಿಜ್ಞಾನಿ ಮಾಜಿ ಸಂಸದ ಡಾ. ವಿನಯ್ ಸಹಸ್ರಬುದ್ಧೆ , ಸಂಸ್ಕೃತ ವಿಷಯ ರಚನೆಕಾರ ಸಮಸ್ತಿ ಗುಬ್ಬಿ, ಸಂಸ್ಕೃತ ವಿದ್ವಾಂಸ ಹಾಗೂ ಲೇಖಕ ಡಾ. ಎಚ್. ಆರ್ ವಿಶ್ವಾಸ್, ಸೃಜನಾತ್ಮಕ ಶಿಕ್ಷಕಿ ವಂದನಾ ರೈ ಹಾಗೂ 60ಕ್ಕೂ ಹೆಚ್ಚು ಭಾಷಾತಜ್ಞರು, ಹಿರಿಯ ಸಾಹಿತಿಗಳು, ಉದಯೋನ್ಮುಖ ಬರಹಗಾರರು, ಲೇಖಕರು, ಯುವ ಕವಿಗಳು, ಗಾಯಕರು ಭಾಗವಹಿಸಲಿದ್ದಾರೆ ಎಂದು ಸುನೀಲ್ ಕುಲಕರ್ಣಿ ಹೇಳಿದರು.
ಡಾ. ಆರ್. ಬಾಲಸುಬ್ರಹ್ಮಣ್ಯರಿಗೆ ಲಿಟ್ ಫೆಸ್ಟ್ ಗೌರವ
ಈ ಬಾರಿಯ ಮಂಗಳೂರು ಲಿಟ್‌ಫೆಸ್ಟ್ ಗೌರವಕ್ಕೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ ಆಯೋಗದ ಸದಸ್ಯ ಡಾ. ಆರ್.ಬಾಲಸುಬ್ರಮಣ್ಯಂ ಆಯ್ಕೆಯಾಗಿದ್ದಾರೆ.
ಲಿಟ್ ಫೆಸ್ಟ್‌ನಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭಾರತ್ ಫೌಂಡೇಶನ್‌ನ ಟ್ರಸ್ಟಿ ಶ್ರೀರಾಜ ಗುಡಿ ಪ್ರಕಟಿಸಿದರು. ಎರಡು ದಿನಗಳ ಚಿಂತನ-ಮಂಥನದ ಸಾಹಿತ್ಯ ಉತ್ಸವದಲ್ಲಿ 14 ಪುಸ್ತಕ (8 ಕನ್ನಡ ಮತ್ತು 6 ಇಂಗ್ಲಿಷ್ ) ಪುಸ್ತಕಗಳು ಪ್ರಕಟಗೊಳ್ಳಲಿದೆ. ಅಂಧರಿಗೆ ವಿಶೇಷ ಸೇಶನ್ ‘ ಸೈಟ್ ಇನ್ ಸೈಟ್’ ಆಯೋಜಿಸಲಾಗಿದೆ.