ಸೈಬರ್ ಕ್ರೈಮ್: ಮಂಗಳೂರಿನಲ್ಲಿ 2024ರಲ್ಲಿ 134 ಪ್ರಕರಣ ದಾಖಲು

Update: 2024-12-30 15:28 GMT

ಮಂಗಳೂರು, ಡಿ.30: ಆನ್‌ಲೈನ್ ವಂಚನೆಯ ಬಗ್ಗೆ ಪೊಲೀಸರು ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮುಂದುವರಿಸಿದ್ದರೂ, ಜನರು ಮಾತ್ರ ಇನ್ನೂ ವಂಚನೆಯ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024ರಲ್ಲಿ 134 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದೆ.

2024ರಲ್ಲಿ ವಿವಿಧ ಪ್ರಕರಣಗಳಲ್ಲಿ ಕಳ್ಳರು ತಮ್ಮ ಬಲೆಗೆ ಬಿದ್ದ ಗಟ್ಟಿ ಕುಳಗಳ ಖಾತೆಗಳಿಂದ 40,46,75,693 ರೂ. ಹಣವನ್ನು ದೋಚಿದ್ದಾರೆ. ಖಾತೆಗಳಲ್ಲಿ 9,32,54,814 ರೂ. ಸ್ತಂಬನಗೊಂಡಿದೆ. 2,55,45,674 ರೂ. ಬಿಡುಗಡೆಯಾಗಿದೆ.

ಕಳೆದ ಮೂರು ವರ್ಷಗಳ ಪೈಕಿ ಅತಿ ಹೆಚ್ಚು ಹಣವನ್ನು 2024ರಲ್ಲಿ ಕಳ್ಳರು ಎಗರಿಸಿದ್ದಾರೆ ಎಂಬ ವಿಚಾರ ಮಂಗಳೂರು ನಗರ ಪೊಲೀಸ್ ಆಯುಕ್ತರು ಬಿಡುಗಡೆಗೊಳಿಸಿದ ಸೈಬರ್ ವಂಚನೆ ಪ್ರಕರಣಗಳ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

2022ರಲ್ಲಿ 63 ಪ್ರಕರಣಗಳಲ್ಲಿ 61,00,000 ರೂ. ಹಾಗೂ 2023ರಲ್ಲಿ 236 ಪ್ರಕರಣಗಳಲ್ಲಿ 9,83, 56,130 ರೂ. ವಂಚನೆಯಾಗಿತ್ತು.

2024ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಸೈಬರ್ ಪ್ರಕರಣಗಳು ಕಡಿಮೆ ಆಗಿದೆ. ಆದರೆ ಕಳೆದುಕೊಂಡ ಹಣದ ಮೊತ್ತ ಜಾಸ್ತಿಯಾಗಿದೆ.

2022ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 55 ಪ್ರಕರಣಗಳು, ಇತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8, ಒಟ್ಟು 63 ಪ್ರಕರಣ ಗಳು ದಾಖಲಾಗಿದ್ದವು. 2023ರಲ್ಲಿ ಸೆನ್ ಪೊಲೀಸ್ ಠಾಣೆ 196 , ಇತರ ಪೊಲೀಸ್ ಠಾಣೆಗಳಲ್ಲಿ 40, ಒಟ್ಟು 236 ಪ್ರಕರಣಗಳು. 2024ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 62 ಸೈಬರ್ ವಂಚನೆ ಪ್ರಕರಣಗಳು ದಾಖಲಾಗುವುದರೊಂದಿಗೆ ವಂಚನೆ ಪ್ರಕರಣಗಳು ಇಳಿಕೆಯಾಗಿತ್ತು. ಆದರ ಇದೇ ವೇಳೆ ಇತರ ಪೊಲೀಸ್ ಠಾಣೆಗಳಲ್ಲಿ 72 ಪ್ರಕರಣಗಳು ದಾಖಲಾಗುವುದರೊಂದಿಗೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು.

ಕಳೆದ ಮೂರು ವರ್ಷಗಳಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ 313 ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ 120 ಸೇರಿದಂತೆ 413 ಪ್ರಕರಣಗಳು ದಾಖಲಾಗಿವೆ. 50, 91, 31,823 ರೂ.ಗಳನ್ನು ಕಳ್ಳರು ದೋಚಿದ್ದಾರೆ.

*ಹಣ ಹೂಡಿಕೆ ಪ್ರಕರಣಗಳಲ್ಲಿ ಹೆಚ್ಚು ವಂಚನೆ: ಜನರು ಹೆಚ್ಚು ಹಣ ಗಳಿಸುವ ಉದ್ದೇಶಕ್ಕಾಗಿ ವಂಚಕರ ವಿವಿಧ ಆಫರ್‌ ಗಳನ್ನು ನಂಬಿ ಹಣ ಹೂಡಿಕೆಯ ಕಡೆಗೆ ಒಲವು ತೋರಿಸಿ ಹಣ ಕಳೆದುಕೊಂಡಿದ್ದಾರೆ. 2024ರಲ್ಲಿ 134 ಪ್ರಕರಣಗಳ ಪೈಕಿ ಹಣ ಹೂಡಿಕೆಯ ಹೆಸರಲ್ಲಿ ಆಗಿರುವ ವಂಚನೆ ಪ್ರಕರಣಗಳು 67 ಅಂದರೆ ಶೇ 50ರಷ್ಟು ಪ್ರಕರಣಗಳು ಹೂಡಿಕೆಯ ಹೆಸರಲ್ಲಿ ಆಗಿದೆ. ಹೂಡಿಕೆಯ ಹೆಸರಿನಲ್ಲಿ ಜನರನ್ನು ನಂಬಿಸಿ ವಂಚಕರು ತಮ್ಮ ಖಾತೆಯನ್ನು ತುಂಬಿಸಿದ್ದಾರೆ. ಹೂಡಿಕೆ ಹೆಸರಲ್ಲಿ ವಂಚನೆಯಾಗಿರುವ ಮೊತ್ತ 30, 36, 61, 299 ರೂ. ಅಂದರೆ ಶೇ 75ರಷ್ಟು ಹಣ ಹೂಡಿಕೆ ಹೆಸರಲ್ಲಿ ಕಳ್ಳರು ದೋಚಿದ್ದಾರೆ.

ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ಸೈಬರ್ ಅಪರಾಧ ಸಂಬಂಧಿತ 5,498 ದೂರುಗಳನ್ನು ದಾಖಲಿ ಸಲಾಗಿದೆ. ಈ ಪೈಕಿ ಎಫ್‌ಐಆರ್ ಆಗಿರುವುದು 215 , ಮುಕ್ತಾಯವಾದ ಪ್ರಕರಣಗಳು 4,907 ಹಾಗೂ ಬಾಕಿ ಇರುವ ಪ್ರಕರಣಗಳು 591. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸೈಬರ್ ಕ್ರೈಮ್ಸ್ ಪ್ರಕರಣಗಳು 2024ರಲ್ಲಿ 18 ದಾಖಲಾಗಿತ್ತು. ಇದರಲ್ಲಿ ಮಹಿಳೆಯರ ಪ್ರಕರಣಗಳು 10 ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು 8.

*42 ಮಂದಿ ಆರೋಪಿಗಳ ಬಂಧನ: 2024ರಲ್ಲಿ ಸೈಬರ್ ಕ್ರೈಮ್ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರು ಪೊಲೀಸರು ನಡೆಸಿರುವ ಕಾರ್ಯಾಚರಣೆಗಳಲ್ಲಿ 42 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ 15 ಮಂದಿ ಕರ್ನಾಟಕದ ಮತ್ತು 11 ಮಂದಿ ಕೇರಳ ಮೂಲದ ಆರೋಪಿಗಳು.

ತಮಿಳುನಾಡು 9, ಆಂಧ್ರಪ್ರದೇಶ 2, ಕ್ರಮವಾಗಿ ಒಡಿಶಾ, ಮಹಾರಾಷ್ಟ್ರದ ,ರಾಜಸ್ಥಾನ, ದಿಲ್ಲಿ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

2024ರಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 10.84 ಕೋಟಿ. ರೂ.ಗಳ ಹೂಡಿಕೆ ವಂಚನೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಇಬ್ಬರನ್ನು ಬಂಧಿಸಲಾಗಿದೆ. ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧಿತ ಜಮ್ಮು ಮತ್ತು ಕಾಶ್ಮೀರ, ಕೇರದ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ದಾಖಲಾಗಿದ್ದ ಐಡೆಂಟಿಟಿ ಹೆಸರಲ್ಲಿ 1,82, 000 ರೂ.ಗಳ ವಂಚನೆ ಪ್ರಕರಣದಲ್ಲಿ ರಾಜಸ್ಥಾನದ ಓರ್ವನನ್ನು ಮತ್ತು ಸೆನ್ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದಾಖಲಾದ 1,31, 396 ರೂ.ಗಳ ವಂಚನೆ ಪ್ರಕರಣದಲ್ಲಿ ದಕ್ಷಿಣ ದಿಲ್ಲಿಯ ಓರ್ವನನ್ನು ಬಂಧಿಸಲಾಗಿದೆ.

2023ರಲ್ಲಿ ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ಉದ್ಯೋಗ ನೀಡುವ ಆಮಿಷ ಒಡ್ಡಿ ಮಾಡಿರುವ 6.07 ಲಕ್ಷ ರೂ.ಗಳ ವಂಚನೆ ಪ್ರಕರಣದಲ್ಲಿ ತಮಿಳುನಾಡಿನ ಓರ್ವ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅರೆಕಾಲಿಕ ಉದ್ಯೋಗದ ಹೆಸರಲ್ಲಿ ಕೋಣಾಜೆ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದ 28, 18, 065 ರೂ.ಗಳ ವಂಚನೆ ಪ್ರಕರಣದಲ್ಲಿ ಜಮ್ಮು ಕಾಶ್ಮೀದ ಒಬ್ಬ ಮತ್ತು ಕೇರಳದ ಮತ್ತೊಬ್ಬ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ನಗರ ಪೊಲೀಸರ ವರದಿ ತಿಳಿಸಿದೆ.

*ಜಾಗೃತಿ ಕಾರ್ಯಕ್ರಮ: ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 217 ಜನಜಾಗೃತಿ ಕಾರ್ಯಕ್ರಮವನ್ನು ಪೊಲೀಸರು ನಡೆಸಿದ್ದಾರೆ.

ಇದರಲ್ಲಿ 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರಿಕರು ಇದ್ರಲ್ಲಿ ಭಾಗಿಯಾಗಿದ್ದಾರೆ. ಸೈಬರ್ ಕ್ರೈಮ್‌ಗೆ ಸಂಬಂಧಿಸಿ ನಡೆಸಲಾದ ಸೈಬರ್ ಕ್ರೈಮ್ ಜಾಗೃತಿ ವಾಕಥಾನ್, ವೇದಿಕೆ ಕಾರ್ಯಕ್ರಮಗಳಲ್ಲಿ 4 ಸಾವಿರ ಮಂದಿ ಭಾಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News