ಜ.4, 5ರಂದು ಮಂಚಿಯಲ್ಲಿ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2025-01-02 07:42 GMT

ಬಂಟ್ವಾಳ: ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಚಿ-ಕೊಳ್ನಾಡು ಹೈಸ್ಕೂಲಿನಲ್ಲಿ ಹಿರಿಯ ಸಾಹಿತಿ ಎಳೆಯರ ಗೆಳೆಯ ಮುಳಿಯ ಶಂಕರ ಭಟ್ಟ ಅವರ ಸರ್ವಾಧ್ಯಕ್ಷತೆಯಲ್ಲಿ ಜ.4 ಮತ್ತು 5ರಂದು ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾ-ಬಾಳಿಕೆ ತಿಳಿಸಿದ್ದಾರೆ.

ಬಿ ಸಿ ರೋಡಿನ ಕನ್ನಡ ಭವನದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜ.4 ರಂದು ಬೆಳಗ್ಗೆ 10 ಗಂಟೆಗೆ ಕೊಳ್ನಾಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಶ್ರಫ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ 2 ದಿನಗಳ ಸಾಹಿತ್ಯ ಜಾತ್ರೆಗೆ ಚಾಲನೆ ನೀಡುವರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಧ್ವಜಾರೋಹಣಗೈಯುವರು.

ಅಪರಾಹ್ನ 3 ಗಂಟೆಗೆ ಕನ್ನಡ ಭುವನೇಶ್ವರಿ ಮೆರವಣಿಗೆ ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಿಂದ ಆರಂಭಗೊಳ್ಳಲಿದ್ದು, ಮಂಚಿ ಗ್ರಾಪಂ ಅಧ್ಯಕ್ಷ ಜಿ.ಎಂ.ಇಬ್ರಾಹಿಂ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈಯುವರು. ಕುಕ್ಕಾಜೆ ಭಜನಾ ಮಂದಿರ ಅಧ್ಯಕ್ಷ ಎನ್. ಸಂಜೀವ ಆಚಾರ್ಯ ಮೆರವಣಿಗೆ ಉದ್ಘಾಟಿಸುವರು.

ಸಂಜೆ 4:30ಕ್ಕೆ ಸಾಹಿತಿ, ಡಾ| ನಾಗವೇಣಿ ಮಂಚಿ ಸಮ್ಮೇಳನ ಉದ್ಘಾಟಿಸುವರು. ವಸ್ತು ಪ್ರದರ್ಶನವನ್ನು ಡಾ.ಮುಕುಂದ ಪ್ರಭು ಉದ್ಘಾಟಿಸುವರು, ಪುಸ್ತಕ ಮಳಿಗೆಯನ್ನು ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸುವರು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್, ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ.ರಮಾನಾಥ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿದೇವಿ ಮಾಲಗಿತ್ತಿ ಸಹಿತ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸಭಾ ಕಾರ್ಯಕ್ರಮದ ಬಳಿಕ ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬಬ್ರುವಾಹನ ಕಾಳಗ, ಅಗ್ರಪೂಜೆ ಯಕ್ಷಗಾನ ನಡೆಯಲಿದೆ ಎಂದ ಅವರು ಜ.5ರಂದು ಬೆಳಗ್ಗೆ ಗಮಕ ವಾಚನ, ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈಭವ, ಅನಿತಾ ನರೇಶ್ ಮಂಚಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ವಾಚನ, ಗಾಯನ, ಕುಂಚ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಕೃಷಿ ಹಾಗೂ ಸಾಹಿತ್ಯ ವಿಚಾರದಲ್ಲಿ ವಿಚಾರಗೋಷ್ಠಿ ಸಂಕಪ್ಪ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಂಚಿ ಕೊಳ್ನಾಡು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಾ.ವೀಣಾ ತೋಳ್ಪಾಡಿ ಹಾಗೂ ಅನಸೂಯಾ ರಾವ್ ಅವರಿಂದ ಉಪನ್ಯಾಸ ಕಾರ್ಯಕ್ರಮ, ಸಂಘ, ಸಂಸ್ಥೆಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ ವಹಿಸಲಿದ್ದಾರೆ. ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ ಸಮಾರೋಪ ಭಾಷಣ ಮಾಡುವರು. ಬಳಿಕ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು ಸಮ್ಮೇಳನದ ಯಶಸ್ಸಿಗೆ ಹಲವು ಸಮಿತಿಗಳನ್ನು ರಚಿಸಲಾಗಿದ್ದು ಶಾಲಾಭಿವೃದ್ಧಿ ಸಮಿತಿ, ಹೈಸ್ಕೂಲ್ ಅಧ್ಯಾಪಕ ವೃಂದ, ಹಿರಿಯ ವಿದ್ಯಾರ್ಥಿಗಳು, ಹಾಗೂ ವಿದ್ಯಾರ್ಥಿಗಳು, ಪೋಷಕರು ಪೂರ್ಣ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಚಿತ್ರಕಲಾ ಅಧ್ಯಾಪಕರ ತಂಡ ಸಭಾಂಗಣದಲ್ಲಿ ವರ್ಣಚಿತ್ತಾರ ಮೂಡಿಸುವ ಕಾರ್ಯ ಆರಂಭಿಸಿದ್ದು, ಮಂಚಿ, ಕೊಳ್ನಾಡು ಪರಿಸರದಲ್ಲಿ ಸಾಹಿತ್ಯ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಸಂಯೋಜಕ ರಾಮಪ್ರಸಾದ್ ರೈ ತಿರುವಾಜೆ, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಪ್ರಧಾನ ಕಾರ್ಯದರ್ಶಿಗಳಾದ ವಿ.ಸು. ಭಟ್, ರಮಾನಂದ ನೂಜಿಪ್ಪಾಡಿ, ಗೌರವ ಕೋಶಾಧಿಕಾರಿ ಡಿ.ಬಿ. ಅಬ್ದುಲ್ ರಹಿಮಾನ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಡಿ. ಮಂಚಿ, ಸಂಚಾಲಕ ಬಿ.ಎಂ. ಅಬ್ಬಾಸ್ ಅಲಿ, ಕೋಶಾಧಿಕಾರಿ ಸುಲೈಮಾನ್, ಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಆರ್ಥಿಕ ಸಮಿತಿಯ ಸಂಚಾಲಕ ನಿಶ್ಚಲ್ ಜಿ.ಶೆಟ್ಟಿ ಕಲ್ಲಾಡಿ, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಅಬೂಬಕ್ಕರ್ ಅಮ್ಮುಂಜೆ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News