ಆತ್ಮಹತ್ಯೆ ಪ್ರಚೋದನೆ ಪ್ರಕರಣ| ಆರೋಪಿಯ ಅನಾರೋಗ್ಯದ ದಾಖಲೆ ಬಿಡುಗಡೆಗೆ ಆಗ್ರಹ
ಮಂಗಳೂರು, ಜ.2: ನಗರದ ಎಂಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ಮನೋಹರ್ ಪಿರೇರಾ ಎಂಬವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಆಸ್ಪತ್ರೆಗೆ ದಾಖಲಾಗಿದ್ದು, ಇವರ ಅನಾರೋಗ್ಯದ ಬಗ್ಗೆ ಅನುಮಾನವಿದ್ದು ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ, ಬ್ಯಾಂಕ್ ಸದಸ್ಯ ರೋಬರ್ಟ್ ರೋಸಾರಿಯೋ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅನಿಲ್ ಲೋಬೊ ಅವರು ಬಂಧನವಾದ ಬಳಿಕ ಜೈಲಿಗೆ ಹೋಗದೆ ಅನಾರೋಗ್ಯ ಕಾರಣ ನೀಡಿ 13 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿಲ್ ಲೋಬೊ ಅವರು ನ್ಯಾಯಾಲಯಕ್ಕೆ ನೀಡಿದ ದಾಖಲೆಯಲ್ಲಿ ಸಣ್ಣ ಸರ್ಜರಿ ಎಂದು ಉಲ್ಲೇಖಿಸಲಾಗಿದ್ದು, ಯಾವುದೇ ಪ್ರಾಣಾಪಾಯ ರೋಗದ ಉಲ್ಲೇಖವಿಲ್ಲ. ಜೈಲಿನಲ್ಲಿರಬೇಕಾದ ವ್ಯಕ್ತಿ ಆಸ್ಪತ್ರೆಯಲ್ಲಿ ದಿನದೂಡುತ್ತಿದ್ದು, ಕೂಡಲೇ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಆಸ್ಪತ್ರೆಯವರು ಆಡಳಿತವರು ಬುಲೆಟಿನ್ ಬಿಡುಗಡೆ ಮಾಡಿ, ಅವರಿಗಿರುವ ರೋಗ ಯಾವುದು? ಅವರಿಗೆ ಆಸ್ಪತ್ರೆಯಲ್ಲಿ ಇನ್ನೆಷ್ಟು ದಿನ ಚಿಕಿತ್ಸೆ ನೀಡಬೇಕು? ಎಂಬ ಬಗ್ಗೆ ಬುಲೆಟಿನ್ ಮಾಡಬೇಕು ಎಂದರು.
ಬ್ಯಾಂಕ್‌ನ ಮಾಜಿ ಅಧ್ಯಕ್ಷ ಫ್ರಾನ್ಸಿಸ್ ಕುಟಿನ್ಹೋ ಮಾತನಾಡಿ, ಬ್ಯಾಂಕ್‌ನ ಅವ್ಯವಸ್ಥೆಯ ಬಗ್ಗೆ ನಮಗೆ ಈ ಹಿಂದೆಯೇ ಸುಳಿವು ಸಿಕ್ಕರೂ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಅವರ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದ್ದರು. ಈಗ ಬ್ಯಾಂಕ್ ಅಧ್ಯಕ್ಷರ ಮೇಲೆ ಆರೋಪವಿರುವ ಕಾರಣ ಕೂಡಲೇ ಬ್ಯಾಂಕ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದರು.
ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್ ಮಾತನಾಡಿ, ಎಂಸಿಸಿ ಬ್ಯಾಂಕ್ ಅವ್ಯವಹಾರ ಬಗ್ಗೆ ನಾವು ಈ ಹಿಂದೆಯೇ ಹಲವು ಬಾರಿ ಸಮಾಜದ ಗಮನಕ್ಕೆ ತಂದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಬಲಿದೆ ಎಂದರು.
ಸಾಮಾಜಿಕ ಹೋರಾಟಗಾರರಾದ ಲೋರ್ನಾ ಗೋನ್ಸ್, ಎಂಸಿಸಿ ಬ್ಯಾಂಕ್ ಸದಸ್ಯ ಪೀಟರ್ ಪಿಂಟೋ ಉಪಸ್ಥಿತರಿದ್ದರು.