ಕಲೆಯ ಅಭಿರುಚಿ ಬೆಳೆಸಲು ಕಾರ್ಯಾಗಾರ ಪೂರಕ: ಪ್ರಕಾಶ್ ರಾಜ್
ಮಂಗಳೂರು, ಜ.2: ಕಲೆಗಳ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಕಾಲೇಜುಗಳಲ್ಲಿ ನಡೆಸುವಂತಹ ಕಾರ್ಯಾಗಾರಗಳು ಪೂರಕ ವಾಗಿರುತ್ತವೆ ಎಂದು ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಪ್ರಕಾಶ್ ರಾಜ್ ಅಭಿಪ್ರಾಯಿಸಿ ದ್ದಾರೆ.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ 'ಬಿಯಾಂಡ್ ದಿ ಸ್ಕೋರ್ - ರಿದಂ' ಎಂಬ ಕಾರ್ಯಾಗಾರಕ್ಕೆ ಗುರುವಾರ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನನ್ನ ಕಾಲೇಜು ಅವಧಿಯಲ್ಲಿಯೂ ನಮ್ಮ ಕನ್ನಡ ಅಧ್ಯಾಪಕರು ಪಾಠದ ಜೊತೆ ಪದ್ಯವನ್ನು ನೋಡುವ, ಅದನ್ನು ವಿಮರ್ಶೆ ಮಾಡುವ ಬಗೆಯನ್ನು ತಿಳಿಸಿಕೊಟ್ಟಿರುವುದು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಅಲೋಶಿಯಸ್ ಕಾಲೇಜಿನಲ್ಲಿ ಇಂತಹ ಕಾರ್ಯ ನಡೆಯುತ್ತಿದ್ದು ಹಬ್ಬದ ರೀತಿ ಸಂಭ್ರಮಿಸಲಾಗುತ್ತದೆ. ಕಲೆಯ ಬಗ್ಗೆ ಈ ಯುವ ವಯಸ್ಸಿನಲ್ಲಿ ಅಭಿರುಚಿ, ನಂಬಿಕೆ, ಗ್ರಹಿಕೆಯನ್ನು ಬೆಳೆಸುವುದು ಮುಖ್ಯ ಎಂದವರು ಹೇಳಿದರು.
ಕಳೆದ ವರ್ಷ ಅಲೋಶಿಯಸ್ ನಲ್ಲಿ ನಿರ್ದಿಗಂತ ವತಿಯಿಂದ ಕಲಾ ಹಬ್ಬ ಆಚರಿಸಲಾಗಿತ್ತು. ಫೆಬ್ರವರಿಯಲ್ಲಿ ಮತ್ತೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ಪೂರಕವಾಗಿ ಈ ಕಾರ್ಯಾಗಾರ ಯಶಸ್ವಿಯಾಗಿ ನಡೆಯಲಿ ಎಂದ ಪ್ರಕಾಶ್ ರಾಜ್, ಅವರು ಕಲೆಯನ್ನು ಸಂಭ್ರಮಿಸೋಣ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್, ನಮ್ಮ ಮನದ ಧ್ವನಿಯನ್ನು ಕೇಳಿಸಿಕೊಂಡು ಅದರ ರಿದಂನಲ್ಲಿ ನಡೆದರೆ ಜೀವನ ಸುಖಕರವಾಗಿರುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನುಷ್ ಶೆಟ್ಟಿ, ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಸಂಗೀತ ಪರಿಕರಗಳನ್ನು ನುಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಡಲಿದ್ದಾರೆ ಎಂದರು.
ಕಾರ್ಯಾಗಾರದ ಪ್ರಮುಖರಾದ ಕ್ರಿಸ್ಟೋಫರ್ ಡಿಸೋಜ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಂಠ ಸ್ವಾಮಿ, ಮುನ್ನಾ ಮೈಸೂರು, ಕೃಷ್ಣ ಚೈತನ್ಯ ಉಪಸ್ಥಿತರಿದ್ದರು.
ಸ್ವೀಡಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ನೇತೃತ್ವದ 'ನಿರ್ದಿಗಂತ ’ ಜಂಟಿಯಾಗಿ ’ ರಿದಂ' ಕಾರ್ಯಾಗಾರವು ಇಂದಿನಿಂದ 5ರವರೆಗೆ ನಡೆಯಲಿದೆ.