ಮಂಗಳೂರು ಧರ್ಮಪ್ರಾಂತದಲ್ಲಿ 2025-ಜುಬಿಲಿ ವರ್ಷಕ್ಕೆ ಚಾಲನೆ
ಮಂಗಳೂರು: ಮಂಗಳೂರು ಧರ್ಮಪ್ರಾಂತದಲ್ಲಿ 2025ರ ಜುಬಿಲಿ ವರ್ಷಕ್ಕೆ ಪವಿತ್ರ ಕುಟುಂಬದ ಮಹೋತ್ಸವದ ದಿನವಾದ ರವಿವಾರ ನಗರದ ಹೋಲಿ ರೋಸರಿ ಕೆಥೆಡ್ರಲ್‌ನಲ್ಲಿ ಚಾಲನೆ ನೀಡಲಾಯಿತು.
ರೋಮ್‌ನಲ್ಲಿ ಪೋಪ್ ಫ್ರಾನ್ಸಿಸ್ ಡಿ.24ರಂದು ಜುಬಿಲಿ 2025 ವರ್ಷವನ್ನು ಉದ್ಘಾಟಿಸಿ 2025ನ್ನು ಭರವಸೆಯ ವರ್ಷ ವೆಂದು ಘೋಷಿಸಿದ್ದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ರವಿವಾರ ಈ ಮಹತ್ವದ ವರ್ಷವನ್ನು ಉದ್ಘಾಟಿಸಲಾ ಯಿತು. ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಪವಿತ್ರ ಶಿಲುಬೆಯ ಮೆರವಣಿಗೆಗೆ ಚಾಲನೆ ನೀಡಿ ಸಂದೇಶ ನೀಡಿದರು.
ಈ ಸಂದರ್ಭ ಧರ್ಮಗುರುಗಳು, ಧಾರ್ಮಿಕರು ಮತ್ತು ಭಕ್ತರೊಂದಿಗೆ ಮೆರವಣಿಗೆಯು ರೊಸಾರಿಯೊ ಕ್ಯಾಥೆಡ್ರಲ್‌ಗೆ ಸಾಗಿತು. ಬಿಷಪ್ ನಂತರ ಜ್ಞಾನದೀಕ್ಷೆಯ (ಬ್ಯಾಪ್ಟಿಸಂ) ಕೊಳವನ್ನು ಆಶೀರ್ವದಿಸಿ, ಜ್ಞಾನದೀಕ್ಷೆಯ ಭರವಸೆಗಳನ್ನು ನವೀಕರಿಸಿದರು. 2025ರ ಜುಬಿಲಿ ಉದ್ಘಾಟನೆಯ ಪವಿತ್ರ ಬಲಿಪೂಜೆ ನಡೆಯಿತು.
ಈ ಸಂದರ್ಭ ಧರ್ಮಪ್ರಾಂತದ ಶ್ರೇಷ್ಠ ಗುರು ಫಾ.ಮ್ಯಾಕ್ಸಿಮ್ ನೊರೊನ್ಹಾ, ಫಾ.ನವೀನ್ ಪಿಂಟೊ, ಫಾ.ಬೋನವೆಂಚರ್ ನಜರೆತ್, ಫಾ. ಜೆ.ಬಿ. ಕ್ರಾಸ್ತಾ, ಫಾ. ವಾಲ್ಟರ್ ಡಿಸೋಜ, ಮಂಗಳೂರಿನ ಮಂಗಳ ಜ್ಯೋತಿಯ ಸಹಾಯಕ ನಿರ್ದೇಶಕ ಡಾ. ವಿನ್ಸೆಂಟ್ ಸಿಕ್ವೇರಾ, ರೊಸಾರಿಯೊ ಕೆಥೆಡ್ರಲ್‌ನ ಧರ್ಮಗುರು ಫಾ.ಆಲ್ರೆಡ್ ಪಿಂಟೊ,ದೇರೆಬೈಲ್‌ನ ಧರ್ಮಗುರು ಡಾ. ಜೋಸೆಫ್ ಮಾರ್ಟಿಸ್, ಫಾ. ಅಶ್ವಿನ್ ಕಾರ್ಡೋಜ, ಫಾ. ರೂಪೇಶ್ ಮಾಡ್ತಾ, ಫಾ. ತ್ರಿಶಾನ್ ಡಿಸೋಜ, ಫಾ.ಆನಿಲ್ ಫನಾರ್ಂಡಿಸ್ ಭಾಗವಹಿಸಿದ್ದರು.
*ಕ್ರೈಸ್ತರ ಪುಣ್ಯಕ್ಷೇತ್ರಗಳ ಭೇಟಿಗೆ ಸೂಚನೆ
2025ರ ಜುಬಿಲಿ ವರ್ಷವನ್ನು ಕ್ರೈಸ್ತ ನಿಷ್ಠಾವಂತರಿಗೆ ಆಧ್ಯಾತ್ಮಿಕ ನವೀಕರಣ, ಸಮನ್ವಯ ಮತ್ತು ಪುಣ್ಯಕ್ಷೇತ್ರಗಳ ವಿಶೇಷ ವರ್ಷವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ. ನಗರದ ರೊಸಾರಿಯೊ ಕೆಥೆಡ್ರಲ್, ಬೋಂದೆಲ್‌ನ ಸಂತ ಲಾರೆನ್ಸ್ ಪುಣ್ಯಕ್ಷೇತ್ರ, ಉರ್ವದ ಪೊಂಪೈಮಾತೆ ಪುಣ್ಯಕ್ಷೇತ್ರ, ಜೆಪ್ಪುವಿನ ಸಂತ ಅಂತೋನಿ ಆಶ್ರಮ, ಮುಡಿಪುವಿನ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ, ಪಕ್ಷಿಕೆರೆಯ ಸಂತ ಜೂಡ್ ಪುಣ್ಯಕ್ಷೇತ್ರ, ಬಂಟ್ವಾಳದ ಇನ್ಫೆಂಟ್ ಜೀಸಸ್ ಚರ್ಚ್, ಕಾಸರ ಗೋಡು ಬೇಳ ಶೋಕಮಾತಾ ಪುಣ್ಯಕ್ಷೇತ್ರಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಸೂಚಿಸಲಾಯಿತು.