ಮೂಡುಬಿದಿರೆಯಲ್ಲಿ ಕಂಬಳ ಸಮಿತಿ ಸಭೆ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿಗೆ 'ವೀರ ರಾಣಿ ಅಬ್ಬಕ್ಕ' ರಾಜ್ಯ ಮಟ್ಟದ ಪ್ರಶಸ್ತಿ
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಜನವರಿ 25ರಂದು 22ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳ ನಡೆಯಲಿದ್ದು ಈ ಬಾರಿ ಕಂಬಳವನ್ನು ಶಿಸ್ತು, ಸಮಯ ಪ್ರಜ್ಞೆಯೊಂದಿಗೆ ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ತೀರ್ಮಾನಿಸಿದ್ದು ಬೆಳಗ್ಗೆ 8.30ಕ್ಕೆ ಕೋಣಗಳನ್ನು ಕಡ್ಡಾಯವಾಗಿ ಕರೆ ಇಳಿಸಲಿದ್ದೇವೆ ಎಂದು ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ತಿಳಿಸಿದ್ದಾರೆ.
ಅವರು ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಮೂಡುಬಿದಿರೆ ಕಂಬಳ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳುನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿದ್ದು, ಈ ಬಾರಿ ಅಂತರ್ ರಾಷ್ಟ್ರೀಯ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಮುಲ್ಕಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಆವರಣಗೋಡೆಯನ್ನು ನಿರ್ಮಿಸಲಾಗಿದೆ. ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮ ದಲ್ಲಿ ಕಂಬಳ ಮ್ಯೂಸಿಯಂ ನಿರ್ಮಿಸುವ ಕುರಿತು ಕಳೆದ ಅವಧಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಮಂಜೂರಾಗುವ ಹಂತದಲ್ಲಿತ್ತು. ಈ ಬಾರಿ ಅನುದಾನ ಕೊರತೆ ಇದ್ದರೂ, ಮ್ಯೂಸಿಯಂ ನಿರ್ಮಾಣಕ್ಕೆ ಪೂರಕವಾದ ಪ್ರಯತ್ನ ಗಳನ್ನು ಮಾಡಲಾಗುವುದು ಎಂದರು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಡಲಕೆರೆ ನಿಸರ್ಗಧಾಮದಲ್ಲಿ ಕಂಬಳ ಸಮಿತಿಗೆ ವಿಶಾಲವಾದ ಜಾಗವಿದ್ದು, ಅರಣ್ಯಾಧಿಕಾರಿಗಳಲ್ಲಿ ಸಮಾಲೋಚಿಸಿ ಜಾಗ ಗುರುತು ಮಾಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈ ಬಾರಿ ಕಂಬಳದಲ್ಲಿ ಮ್ಯೂಸಿಯಂಗೆ ಶಿಲಾನ್ಯಾಸ ಮಾಡಿದಲ್ಲಿ, ಅದರ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಸುರೇಶ್ ಕೆ.ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಯುವಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಮುಖರಾದ ಕೆ.ಆರ್ ಪಂಡಿತ್, ಶಾಂತಿ ಪ್ರಸಾದ್ ಹೆಗ್ಡೆ, ಈಶ್ವರ ಕಟೀಲ್ ಮತ್ತಿತರರಿದ್ದರು.