ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಸಂಸದ ಬ್ರಿಜೇಶ್ ಚೌಟ
ಮಂಗಳೂರು, ಜ.3: ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಸದ ಬ್ರಿಜೇಶ್ ಚೌಟ ಶುಕ್ರವಾರ ಹೊಸದಿಲ್ಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪಿಸಬೇಕು, ಕರಾವಳಿ ತೀರದ ಸುರಕ್ಷತೆ ದೃಷ್ಟಿಯಿಂದ ಭಾರತೀಯ ಕೋಸ್ಟ್‌ಗಾರ್ಡ್ ಅಕಾಡಮಿ ಸ್ಥಾಪಿಸಬೇಕು, ದ.ಕ.ದಲ್ಲಿ ಸೈನಿಕ ಶಾಲೆ-ಮಿಲಿಟರಿ ನೆಲೆ ಸ್ಥಾಪಿಸಬೇಕು, ಮಂಗಳೂರು-ಬೆಂಗಳೂರು ನಡುವಿನ ರೈಲು ಹಾಗೂ ರಸ್ತೆ ಸಂಪರ್ಕ ಮತ್ತಷ್ಟು ಸುಗಮಗೊಳಿಸಬೇಕು ಎಂದು ಸಂಸದರು ಮನವಿ ಸಲ್ಲಿಸಿದರು.
ಸಂಸದರಾದ ಬಳಿಕ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮೊದಲ ಬಾರಿಗೆ ಅಧಿಕೃತವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬ್ರಿಜೇಶ್ ಚೌಟ ಜಿಲ್ಲೆಯ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಲೋಚಿಸಿದರು.
ಕರಾವಳಿಯ ಸಹಕಾರ ಬ್ಯಾಂಕಿಂಗ್ ವಲಯದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಣ್ಣ ಉದ್ದಿಮೆದಾರರು ಹಾಗೂ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಕೋ ಆಪರೇಟಿವ್ ಬ್ಯಾಂಕ್‌ಗಳ ಉತ್ತೇಜನ ಅನುಕೂಲ ಮಾಡಲಿದೆ ಎಂದು ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಅವರಲ್ಲಿ ಸಂಸದರು ಮನವಿ ಮಾಡಿದ್ದಾರೆ.