ಮಂಗಳೂರು: ಮಾಜಿ ಮೇಯರ್ ಸುಧೀರ್ ಶೆಟ್ಟಿಯಿಂದ ಅರ್ಹ ಕುಟುಂಬಕ್ಕೆ ಮನೆ ಕೊಡುಗೆ
ಮಂಗಳೂರು: ಕೊಡಿಯಾಲ್ ಬೈಲ್ ವಾರ್ಡ್‌ನ ವಿವೇಕ ನಗರ ಬಳಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಗಣೇಶ್ ಹಾಗೂ ರೋಹಿಣಿ ದಂಪತಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿರುವ ‘ಕೇಶವ ಸದನ’ ಇದರ ಗೃಹ ಪ್ರವೇಶ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸುಧೀರ್ ಶೆಟ್ಟಿ ಕಣ್ಣೂರು, ಬಡ ಕುಟುಂಬದ ಮನೆ ಕುಸಿದ ಸಂದರ್ಭದಲ್ಲಿ ಅವರ ಬಳಿ ಸೂಕ್ತ ದಾಖಲೆಗಳಿರಲಿಲ್ಲ. ಹೀಗಾಗಿ ನಾನು ಮೇಯರ್ ಆಗಿದ್ದಾಗ ಉಚಿತವಾಗಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದನ್ನು ಇಂದು ನೆರವೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಸರೆ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಇನ್ನಷ್ಟು ಮಂದಿ ಬಡವರಿಗೆ ಮನೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಿದ್ದೇನೆ’’ ಎಂದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅರೆಸ್ಸೆಸ್ ಕ್ಷೇತ್ರೀಯ ಸಂಘ ಸರಚಾಲಕ ಡಾ.ವಾಮನ್ ಶೆಣೈ, ಮಂಗಳೂರು ನಗರ ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಮೋನಪ್ಪ ಭಂಡಾರಿ, ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಸುದರ್ಶನ್ ಮೂಡಬಿದ್ರಿ, ಪೂರ್ಣಿಮಾ, ಮಂಜುಳಾ ರಾವ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಕಸ್ತೂರಿ ಪಂಜ ಮತ್ತಿತರರು ಉಪಸ್ಥಿತರಿದ್ದರು.
ವಿವೇಕ್ ಅತಿಥಿಗಳನ್ನು ಸ್ವಾಗತಿಸಿದರು.
12 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ: ಕಳೆದ ಮಳೆಗಾಲದಲ್ಲಿ ಗಣೇಶ್ ರ ಹಳೆಯ ಹೆಂಚಿನ ಮನೆ ಭಾರೀ ಮಳೆಗೆ ಕುಸಿದ್ದಿತ್ತು. ಈ ವೇಳೆ ಮನಪಾ ಮೇಯರ್ ಆಗಿದ್ದ ಸುಧೀರ್ ಶೆಟ್ಟಿ ಕಣ್ಣೂರು ಬಡಕುಟುಂಬದ ನೋವಿಗೆ ಸ್ಪಂದಿಸಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.
ಅದರಂತೆ 12 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದ್ದಾರೆ. ಸುಧೀರ್ ಶೆಟ್ಟಿ ಉಚಿತವಾಗಿ ಕಟ್ಟಿಸಿಕೊಟ್ಟಿರುವ ಐದನೇಯ ಮನೆ ಇದಾಗಿದೆ.