ಉನ್ನತ ಶಿಕ್ಷಣ ಪಡೆದು ದೇಶದ ಸಂಪತ್ತಾಗಿ : ಸ್ಪೀಕರ್ ಯು.ಟಿ.ಖಾದರ್

Update: 2025-01-05 09:05 GMT

ಮಂಗಳೂರು : ಬಡತನವು ಯಾವ ಕಾರಣಕ್ಕೂ ವಿದ್ಯೆ ಕಲಿಯಲು ಅಡ್ಡಿಯಾಗಬಾರದು. ಸ್ವಾಭಿಮಾನದ ಬದುಕಿಗೆ ಶಿಕ್ಷಣ ಅತ್ಯಗತ್ಯವಾಗಿದೆ. ಉನ್ನತ ಶಿಕ್ಷಣ ಪಡೆಯುವುದು ಕೂಡ ಪ್ರತಿಯೊಬ್ಬರ ಕನಸಾಗಬೇಕು. ಹಾಗಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೇಶದ ಸಂಪತ್ತು ಆಗಬೇಕು ಎಂದು ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಕರೆ ನೀಡಿದರು.

ಮಸೂದ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧೀನದಲ್ಲಿ ನಗರ ಹೊರವಲಯದ ಸರಿಪಳ್ಳ ಎಂಬಲ್ಲಿ ನಿರ್ಮಿಸಲಾದ ಮಸೂದ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್‌ನ ನೂತನ ಕಟ್ಟಡವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ರಾಜಕಾರಣಿ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಶಿಕ್ಷಣ ನೀಡುತ್ತಿವೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಬೇಕು. ಬೀದಿಬದಿ ನಿಂತು ಯಾರಿಗೋ ಬೈದರೆ ಅದು ದೇಶಪ್ರೇಮವಾಗದು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಇಂತಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದಾಗ ಮಾತ್ರ ಅದು ನಿಜವಾದ ದೇಶಪ್ರೇಮವಾಗಲಿದೆ ಎಂದು ಯು.ಟಿ.ಖಾದರ್ ನುಡಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ, ಮಸೂದ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ (ಪರೀಕ್ಷಾಂಗ) ಡಾ.ರಿಯಾಝ್ ಬಾಷಾ ಮಾತನಾಡಿ, ಮಂಗಳೂರು ಆರೋಗ್ಯ-ಶಿಕ್ಷಣದ ಹಬ್ ಆಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಧೀನದಲ್ಲಿರುವ 1400ಕ್ಕೂ ಅಧಿಕ ಆರೋಗ್ಯ-ಮೆಡಿಕಲ್ ಶಿಕ್ಷಣ ಸಂಸ್ಥೆಗಳ ಪೈಕಿ ಶೇ.10-15ರಷ್ಟು ಶಿಕ್ಷಣ ಸಂಸ್ಥೆಗಳು ಮಂಗಳೂರಿನದ್ದೇ ಆಗಿದೆ. ಆರೋಗ್ಯ ವಿಜ್ಞಾನ ಕೋರ್ಸ್‌ಗೆ ಹೆಚ್ಚು ಬೇಡಿಕೆಯಿದ್ದು, ಯುವ ಪೀಳಿಗೆಯು ಅದನ್ನು ಸದುಪಯೋಗಪಡಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆಯುತ್ತಿರುವ ರಾಜ್ಯ ಅಥವಾ ಜಿಲ್ಲೆಯ ಸ್ಥಳೀಯ ಭಾಷೆಯನ್ನು ಕಲಿಯಬೇಕು. ರೋಗಿಗಳೊಂದಿಗೆ ಸಂವಹನ ನಡೆಸಲು ಪ್ರಾದೇಶಿಕ ಭಾಷೆಗಳ ಕಲಿಕೆಯು ಅಗತ್ಯವಿದೆ ಎಂದರು.

ಕೋವಿಡ್ ಬಳಿಕ ಹೆಲ್ತ್ ಆ್ಯಂಡ್ ಸೈಯನ್ಸ್‌ನ ಪ್ರಾಮುಖ್ಯತೆ ಹೆಚ್ಚಿವೆ. ದೇಶದ ಆರೋಗ್ಯ ವ್ಯವಸ್ಥೆಯು ಪಾಶ್ಚಿಮಾತ್ಯ ಮಾದರಿಯತ್ತ ಪರಿವರ್ತನೆಗೊಳ್ಳುತ್ತಿವೆ. ಅಲ್ಲಿ ವೈದ್ಯಕೀಯ ರಂಗದಲ್ಲಿ ಟೀಮ್ ವರ್ಕ್ ಪರಿಕಲ್ಪನೆಯು ಪ್ರಾಮುಖ್ಯತೆ ಪಡೆಯುತ್ತಿವೆ. ವಿದ್ಯಾರ್ಥಿಗಳು ಆರೋಗ್ಯ ಶಿಕ್ಷಣವನ್ನು ಪದವಿ ಗಳಿಕೆಯ ಸಾಧನವಾಗಿ ಪರಿಗಣಿಸದೆ, ನೈತಿಕ ಮೌಲ್ಯಕ್ಕೂ ಆದ್ಯತೆ ನೀಡಬೇಕು. ಆ ಮೂಲಕ ರೋಗಿಗಳ ಗುಣಮುಖದ ಮೇಲೆ ಪ್ರಭಾವ ಬೀರಲು ಸಾಧ್ಯವಿದೆ ಎಂದು ಡಾ.ರಿಯಾಝ್ ಬಾಷಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ. ಇಫ್ತಿಕಾರ್ ಅಲಿ ಅವರು ರಾಜೀವ್ ಗಾಂಧಿ ಆರೋಗ್ಯ ವಿವಿಯ ಪರೀಕ್ಷಾ ಕೇಂದ್ರವನ್ನಾಗಿ ಮಸೂದ್ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವಂತೆ ವಿವಿಯ ರಿಜಿಸ್ಟ್ರಾರ್ ಬಳಿ ಮನವಿ ಮಾಡಿದರಲ್ಲದೆ, ಆರೋಗ್ಯ ವಿವಿಯ ಪ್ರಾದೇಶಿಕ ಕೇಂದ್ರವು ಮಂಗಳೂರಿನಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಜ.17ರಂದು ಮುಖ್ಯಮಂತ್ರಿ ಪ್ರಾದೇಶಿಕ ಕೇಂದ್ರದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ನ್ಯೂ ಭಾರತ್ ಇನ್‌ಫ್ರಾಸ್ಟ್ರಕ್ಚರ್ ಮಂಗಳೂರು ಇದರ ಸ್ಥಾಪಕ ಎಸ್.ಎಂ.ಮುಸ್ತಫಾ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯೆ ಡಾ.ವೈಶಾಲಿ ಮಾತನಾಡಿದರು.

ವೇದಿಕೆಯಲ್ಲಿ ನಾಶ್ ಇಂಜಿನಿಯರಿಂಗ್ ದುಬೈ ಇದರ ಅಧ್ಯಕ್ಷ ನಿಸಾರ್ ಅಹ್ಮದ್ ಕೆ.ಎಸ್., ಕಣಚೂರು ಗ್ರೂಪ್ ಆಫ್ ಇಂಡಸ್ಟ್ರೀಸ್ ಆ್ಯಂಡ್ ಇನ್ಸ್ಟಿಟ್ಯೂಶನ್ಸ್‌ನ ಸ್ಥಾಪಕ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಕಾರ್ಪೊರೇಟರ್ ಭಾಸ್ಕರ್ ಮೊಯ್ಲಿ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್, ಮಾಜಿ ಅಧ್ಯಕ್ಷೆ ಧನವಂತಿ, ಸಾಗರ್ ರಿಯಾಲಿಟಿ ಪ್ರಮೋಶನ್ಸ್‌ನ ಆಡಳಿತ ಪಾಲುದಾರ ಗಿರಿಧರ ಶೆಟ್ಟಿ, ಬಾಷಾ ಸಾಹೇಬ್ ಕುಂದಾಪುರ, ಬ್ಯಾರೀಸ್ ಕೆನರಾ ಛೇಂಬರ್ ಆ್ಯಂಡ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ಇಂಡಿಯಾನ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬಳೆ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಹಮ್ಮದ್ ಮಸೂದ್ ಅವರ ಪತ್ನಿ ಮಝಾಹಿರ್ ಎಂ. ಮಸೂದ್, ಮಸೂದ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)ನ ಕೋಶಾಧಿಕಾರಿ ಗುಲ್‌ಶನ್ ಪರ್ವಿನ್, ಟ್ರಸ್ಟಿ ನಾಝ್ನೀನ್, ಡಾ. ನಿಝಾರ್ ಅಹ್ಮದ್, ಕೆ.ಎಸ್. ಇಮ್ತಿಯಾಝ್ ಅಹ್ಮದ್, ಮಸೂದ್ ಕಾಲೇಜ್ ಆ್ಯಂಡ್ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ. ವೀಣಾ ಗ್ರೆಟ್ಟಾ ತಾವ್ರೊ, ಮಸೂದ್ ಕಾಲೇಜ್ ಆಫ್ ಫಿಸಿಯೋಥೆರಪಿ ಇದರ ಪ್ರಾಂಶುಪಾಲೆ ಡಾ. ಅನಿಶಾ ರಫೀಕ್, ಮಸೂದ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈಯನ್ಸಸ್ ಇದರ ಪ್ರಾಂಶುಪಾಲೆ ಡಾ. ಲೀಸಾ ಶರೂನ್ ಮತ್ತಿತರರು ಪಾಲ್ಗೊಂಡಿದ್ದರು.

ಮಸೂದ್ ಕಾಲೇಜ್ ಆ್ಯಂಡ್ ಸ್ಕೂಲ್ ಆಫ್ ನರ್ಸಿಂಗ್‌ನ ಉಪ ಪ್ರಾಂಶುಪಾಲೆ ಡಾ.ವಿಜೇತಾ ಕೊಟ್ಟಾರಿ ಸಂಸ್ಥೆಯ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ ಹಲವು ವರ್ಷಗಳ ಕಾಲ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಣ ಮತ್ತು ಶಿಕ್ಷಣೇತರ ಸಿಬ್ಬಂದಿ ವರ್ಗದ ಸದಸ್ಯರನ್ನು ಸನ್ಮಾನಿಸಲಾಯಿತು.

ಮಸೂದ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)ನ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಆರೀಫ್ ಮಸೂದ್ ಸ್ವಾಗತಿಸಿದರು. ಟ್ರಸ್ಟಿ ಮುಹಮ್ಮದ್ ಆಸೀಫ್ ಮಸೂದ್ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News