ಮಂಗಳೂರು| ಜ.17ರಂದು ಪಡೀಲ್‌ನಲ್ಲಿ ನೂತನ ಡಿಸಿ ಸಂಕೀರ್ಣ ಉದ್ಘಾಟನೆ ?
ಮಂಗಳೂರು, ಜ.3: ನಗರದ ಹೊರವಲಯದ ಪಡೀಲ್‌ನಲ್ಲಿ ಕಳೆದ ಸುಮಾರು ಆರು ವರ್ಷಗಳಿಂದೀಚೆಗೆ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಬಾಕಿ ಕಾಮಗಾರಿ ವೇಗ ಪಡೆದಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.
ರಾಜ್ಯ ಮಟ್ಟದ ಒಲಿಂಪಿಕ್ ಕ್ರೀಡಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಜ. 17ರಂದು ಆಗಮಿಸಲಿರುವ ಹಿನ್ನೆಲೆಯಲ್ಲಿ ಪಡೀಲ್‌ನಲ್ಲಿ ಸುಮಾರು 5.89 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಸಂಕೀರ್ಣದ ಉದ್ಘಾಟನೆಯನ್ನು ನೆರವೇರಿಸುವ ನಿಟ್ಟಿನಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಂಬಂಧಪಟ್ಟವರಿಗೆ ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಶುಕ್ರವಾರ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ಸಂಕೀರ್ಣ ಉದ್ಘಾಟನೆಗೊಂಡ ಬಳಿಕ ಕಚೇರಿಗಳ ಕಾರ್ಯಾರಂಭದ ಕುರಿತಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ರವರಿಗೆ ಸ್ಪೀಕರ್ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಈ ಸಂಕೀರ್ಣದ ಮೂಲಕ ಸಾರ್ವಜನಿಕ ರಿಗೆ ಲಭ್ಯವಾಗಲಿದೆ. ಅದಕ್ಕಾಗಿ ಸಂಕೀರ್ಣಕ್ಕೆ ಬರುವ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಎರಡು ಕಡೆ ಪ್ರವೇಶ ದ್ವಾರ ಇರುವದರಿಂದ ಕೆಳ ಅಂತಸ್ತಿನಲ್ಲಿ ವಿಶ್ರಾಂತಿಗೆ ಸೌಲಭ್ಯ ಹಾಗೂ ಡಿಸಿ ಕಚೇರಿಯ ಸುತ್ತ ಕಂಪೌಂಡ್ ಬಳಿ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
ವಿಕಲಚೇತನರಿಗೆ ಕಚೇರಿಗಳಿಗೆ ಭೇಟಿ ನೀಡಲು ಬೇಕಾದ ಅಗತ್ಯ ವ್ಯವಸ್ಥೆ, ಅಹವಾಲು ಸಲ್ಲಿಕೆಗೆ ಹೆಲ್ಪ್ ಡೆಸ್ಕ್ ಆರಂಭಿಸುವ ಕುರಿತಂತೆಯೂ ಅಧಿಕಾರಿಗಳಿಗೆ ಯು.ಟಿ.ಖಾದರ್ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಈ ಹೊಸ ಕಟ್ಟಡದ ಒಳಗೆ ಬೃಹತ್ ಇಂಡೋರ್ ಆಡಿಟೋರಿಯಂ ನಿರ್ಮಿಸಲಾಗಿದೆ. ಮಲ್ಟಿಪ್ಲೆಕ್ಸ್‌ನಂತೆ ಕಂಡುಬರುವ ಇದರಲ್ಲಿ ಮುಂದಿನ ದಿನಗಳಲ್ಲಿ ಉರ್ವಾಸ್ಟೋರ್‌ನ ಜಿಲ್ಲಾ ಪಂಚಾಯತ್‌ನ ಕಟ್ಟಡದಲ್ಲಿ ಪ್ರಸಕ್ತ ನಡೆಸಲಾ ಗುವ ಕೆಡಿಪಿ ತ್ರೈಮಾಸಿಕದಂತಹ ಸಭೆಗಳನ್ನು ನಡೆಸಲು ಅನುಕೂಲವಾಗಲಿದೆ. ಅಲ್ಲದೆ ಇಲಾಖೆಗಳ ಸಭೆಗಳನ್ನು ಕೂಡ ಇಲ್ಲೇ ನಡೆಸಬಹುದಾಗಿದೆ. ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್, ಸ್ಮಾರ್ಟ್ ಸಿಟಿ ಎಂಡಿ ರಾಜು, ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭ, ಪ್ರೊಬೆಷನರಿ ಐಎಎಸ್ ಶರಣ್ ಉಪಸ್ಥಿತರಿದ್ದರು.
"ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಕಟ್ಟಡದ ಮುಖ, ಪ್ರವೇಶ ದ್ವಾರವೂ ಅದೇ ಭಿನ್ನವಾಗಿ ರೂಪುಗೊಳ್ಳಲಿದೆ. ಈ ಹೊಸ ಕಟ್ಟಡ ಇಡೀ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೇ ಮಾದರಿಯಾಗಲಿದೆ. ಆರ್‌ಡಿಪಿಆರ್ ಹೊರತುಪಡಿಸಿ, ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಿದರೆ ಜನತೆಗೆ ಕಚೇರಿಗಳಿಗೆ ಅಲೆಯುವ ಪ್ರಮೇಯ ತಪ್ಪಲಿದೆ. ಸಮಯ ಉಳಿತಾಯವಾಗುತ್ತದೆ. ಅಧಿಕಾರಿಗಳೂ ಸಭೆಗಳಿಗೆ ಹೊರಗೆ ಕಚೇರಿಗಳಿಗೆ ತೆರಳುವ ಅಗತ್ಯವಿರುವುದಿಲ್ಲ".
-ಯು.ಟಿ.ಖಾದರ್, ಸ್ಪೀಕರ್, ವಿಧಾನಸಭೆ.
ಒಂದೇ ಸೂರಿನಡಿ 33 ಇಲಾಖೆ
ಪಡೀಲಿನಲ್ಲಿ 2015ರ ಎಪ್ರಿಲ್ 28ರಂದು ರಾಜ್ಯ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು 2017-18ರಲ್ಲಿ ಕಾಮಗಾರಿ ಆದೇಶವಾಗಿ 2018ರ ಮಾರ್ಚ್ 17ರಿಂದ ಒಟ್ಟು 2,26,550.51 ಚದರ ಅಡಿ ವಿಸ್ತೀರ್ಣದ ಸಂಕೀರ್ಣದ ಕಾಮಗಾರಿ ಆರಂಭಗೊಂಡಿತ್ತು. ಒಟ್ಟು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಂಕೀರ್ಣಕ್ಕೆ ಕರ್ನಾಟಕ ಹೌಸಿಂಗ್ ಬೋರ್ಡ್ ಕಾರ್ಪೊರೇಷನ್ 55 ಕೋಟಿ ರೂ. ಹಾಗೂ ಸ್ಮಾರ್ಟ್‌ಸಿಟಿ ಲಿಮಿಟೆಡ್ 20 ಕೋಟಿ ರೂಗಳ ಅನುದಾನ ಒದಗಿಸಿದೆ.
ನೆಲ ಮಹಡಿಯಲ್ಲಿ ಕಚೇರಿ ಸಿಬ್ಬಂದಿಗೆ ಪಾರ್ಕಿಂಗ್, ತಳ ಮಹಡಿಯಲ್ಲಿ ಪ್ರವೇಶ ದ್ವಾರ ಹಾಗೂ ಮೂರು ಮಹಡಿಗಳಿವೆ. ಕಂದಾಯ ಕಚೇರಿಯ ವಿವಿಧ ಕಚೇರಿಗಳು ಸೇರಿ ಸುಮಾರು 33 ಇಲಾಖೆಗಳ ಕಚೇರಿಗಳು ನೂತನ ಸಂಕೀರ್ಣಕ್ಕೆ ಹಂತ ಹಂತವಾಗಿ ಸ್ಥಳಾಂತರಗೊಳ್ಳಲಿವೆ. ಜಿಲ್ಲಾಧಿಕಾರಿ ಕಚೇರಿಯ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಕಚೇರಿಗಳು ಸಂಕೀರ್ಣದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.