ಕರಾವಳಿ ಉತ್ಸವ| ಜ.5ರಂದು ಶ್ವಾನ ಪ್ರದರ್ಶನ - ಯುವ ಮನ ಮ್ಯೂಸಿಕಲ್ ನೈಟ್

Update: 2024-12-30 13:33 GMT

ಮಂಗಳೂರು, ಡಿ.30: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಭಾಗವಾಗಿ ಜಿಲ್ಲಾಡಳಿತವು ಕದ್ರಿ ಉದ್ಯಾನವನದಲ್ಲಿ ಯುವ ಮನ ಹಾಗೂ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕರಾವಳಿ ಉತ್ಸವ ಮೈದಾನ ದಲ್ಲಿ ಪ್ರದರ್ಶನ ಮೇಳ, ಕದ್ರಿ ಪಾರ್ಕ್‌ನಲ್ಲಿನ ರೊಬೊಟಿಕ್ ಬಟರ್‌ಫ್ಲೈ ಶೋ ಸೇರಿಂದಂತೆ ಕರಾವಳಿ ಉತ್ಸವ ಉತ್ತಮ ಆಕರ್ಷಣೆ ಪಡೆದಿದೆ. ಇದೀಗ ಶ್ವಾನ ಪ್ರದರ್ಶನ, ಯುವ ಮನ ಹಾಗೂ ಚಲನಚಿತ್ರೋತ್ಸವದ ಮೂಲಕ ಕರಾವಳಿ ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡುವ ಪ್ರಯತ್ನ ನಡೆಯುತ್ತಿದೆ ಎಂದವರು ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೇತೃತ್ವದಲ್ಲಿ ಜ.5ರಂದು ಶ್ವಾನ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ 3ರಿಂದ 6 ತಿಂಗಳು, ಆರು ತಿಂಗಳಿನಿಂದ ಒಂದು ವರ್ಷ ಹಾಗೂ 1 ವರ್ಷ ಮೇಲ್ಪಟ್ಟು ತಳಿವಾರು ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನವಾಗಿ 10,000 ರೂ., ದ್ವಿತೀಯ 7500 ರೂ. ಹಾಗೂ ತೃತೀಯ 5,000 ರೂ. ಬಹುಮಾನ ನೀಡಲಾಗುವುದು.

ಲ್ಯಾಬ್ರಡಾರ್, ಗೋಲ್ಡನ್ ರಿಟ್ರೀವರ್, ಜರ್ಮನ್ ಶೆಪರ್ಡ್ ರಾಟ್‌ವೀಲರ್, ಶಿಟ್ಜು, ಡ್ಯಾಶ್‌ಹಂಡ್ ಮೊದಲಾದ ಸಾಮಾನ್ಯ ಬ್ರೀಡ್‌ಗಳ ಜತೆಯಲ್ಲಿ ಚೌಚೌ, ಮಿನಿಯೇಚರ್ ಪಿಂಚರ್, ಮಿನಿ ಪಾಮ್, ಪೋಡಲ್, ಬೆಲ್ಜಿಯನ್ ಮೆಲಿನೊಯಿಸ್ ಮೊದಲಾದ ವಿಶೇಷ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿರಲಿವೆ. ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನೋಂದಣಿ ನಡೆಯಲಿದ್ದು, 3ರಿಂದ 6ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಿಂದ ಆಕರ್ಷಕ ಪ್ರದರ್ಶನ ಈ ಸಂದರ್ಭ ನಡೆಯಲಿದೆ. ಅಪರಾಧ ಪತ್ತೆ ಕಾರ್ಯದಲ್ಲಿ ಶ್ವಾನಗಳ ಪಾಲ್ಗೊಳ್ಳುವಿಕೆ, ಅವುಗಳಿಗೆ ಇಲಾಖೆಯಿಂದ ನೀಡಲಾಗುವ ತರಬೇತಿ ಬಗ್ಗೆಯೂ ಪ್ರದರ್ಶನದಲ್ಲಿ ಮಾಹಿತಿ ನೀಡಲಾಗುತ್ತದೆ.

ಕರಾವಳಿ ಉತ್ಸವದ ಭಾಗವಾಗಿ ಯುವಜನತೆಯ ಆಕರ್ಷಣೆಗಾಗಿ ಯುವ ಮನ ಎಂಬ ವಿಶೇಷ ಕಾರ್ಯಕ್ರಮ ಕದ್ರಿ ಪಾರ್ಕ್‌ನಲ್ಲಿ ಜ. 4 ಮತ್ತು 5ರಂದು ಆಯೋಜಿಸಲಾಗಿದೆ. ಜ. 4ರಂದು ಸಂಜೆ 3ರಿಂದ 6ರವರೆಗೆ ಕಾರು ಮತ್ತು ಬೈಕ್‌ಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ವಿಂಜೇಟ್ ಕಾರು, ಬೈಕುಗಳಲ್ಲದೆ, ವಿನೂತನ ಮಾದರಿಯ ಹೊಸ ಕಾರು ಹಾಗೂ ಬೈಕ್‌ಗಳ ಪ್ರದರ್ಶನವೂ ಇರಲಿದೆ. ಜ. 5ರಂದು ಬೆಳಗ್ಗೆ 7ರಿಂದ 8.30ವರರೆಗೆ ಜಿಲ್ಲೆಯ ವಯೋಲಿನ್ ವಾದಕರಿಂದ ಉದಯ ರಾಗ ಎಂಬ ವಿಶೇಷ ಕಾರ್ಯಕ್ರಮ ಕದ್ರಿ ಪಾರ್ಕ್‌ನ ವೇದಿಕೆಯಲ್ಲಿ ನಡೆಯಲಿದೆ. ಎರಡು ದಿನ ಸಂಜೆ 5 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗ್ಯಾಬ್ರಿಯಲ್ ಟ್ರೂಪ್, ರೌಂಡ್ ಟೇಬಲ್ ಇನ್‌ಸ್ಪೈರಿಂಗ್ ಟಾಕ್, ಆದಿತ್ಯ ಅವರಿಂದ ತುಳು ರ್ಯಾಪ್ ನೃತ್ಯ, ಕಲಾಶಾಲೆ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳ ಸಂದರ್ಭ ಕದ್ರಿ ಉದ್ಯಾನವನ ನಡುವಿನ ರಸ್ತೆಯಲ್ಲಿ ಸಾರ್ವಜನಿಕರ ವಾಹನ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕರಾವಳಿ ಉತ್ಸವದ ಭಾಗವಾಗಿ ಜ. 2ಮತ್ತು 3ರಂದು ಬಿಜೈನ ಭಾರತ್ ಸಿನೆಮಾಸ್‌ನಲ್ಲಿ ತುಳು, ಕೊಂಕಣಿ ಭಾಷೆಯನ್ನು ಒಳಗೊಂಡು ಚಲನಚಿತ್ರ ಹಾಗೂ ಸಾಕ್ಷ್ಯ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಚಲನಚಿತ್ರ ಉತ್ಸವದಲ್ಲಿ ಸಾರಾಂಶ (ಕನ್ನಡ), ತರ್ಪಣ (ಕೊಂಕಣಿ), ಕುಬಿ ಮತ್ತು ಇಯಾಲ (ಕನ್ನಡ), ಗರುಡ ಗಮನ ವೃಷಭ ವಾಹನ (ಕನ್ನಡ), ಅರಿಷಡ್ವರ್ಗ (ಕನ್ನಡ), 19.20.21 (ಕನ್ನಡ)ರಾಜಾ ಸೌಂಡ್ಸ್ ಆ್ಯಂಡ್ ಲೈಟ್ಸ್ (ತುಳು), ಮಧ್ಯಂತರ ಕನ್ನಡ ಕಿರುಚಿತ್ರ), ಕಾಂತಾರ (ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು.

ಗೋಷ್ಟಿಯಲ್ಲಿ ಪಶುಪಾಲನಾ ಮತ್ತು ಪಶು ವೈದಯಕೀಯ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕ ಡಾ. ಅರುಣ್ ಕುಮಾರ್, ಎಸ್ಪಿ ಯತೀಶ್ ಎನ್., ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ (ಪ್ರಭಾರ) ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.

ಜ.17ರಿಂದ 25 ರಾಜ್ಯ ಮಟ್ಟದ ಒಲಿಪಿಂಕ್

ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಜ. 17ರಿಂದ 23ರವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಒಲಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿದೆ.

ಜ.17ರಂದು ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಒಲಿಂಪಿಕ್ಸ್‌ಗೆ ಚಾಲನೆ ನೀಡಲಿದ್ದಾರೆ. ದ.ಕ. ಜಿಲ್ಲೆಯಲ್ಲಿ 12 ವಿವಿಧ ಕ್ರೀಡೆಗಳು ವಿವಿಧ ಕಡೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ 11 ವಿವಿಧ ಕ್ರೀಡೆ ಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಅಥ್ಲೇಟ್‌ಗಳು ಸೇರಿದಂತೆ ಒಟ್ಟು 4000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿ ಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News