ಕರಂಬಾರು: ಭೀಮಾ ಕೋರೆಗಾಂವ್ ವಿಜಯ ದಿನಾಚರಣೆ
ಮಂಗಳೂರು: ಶೋಷಿತರ ಮೊಟ್ಟ ಮೊದಲ ಸ್ವಾಭಿಮಾನದ ಕದನ ಭೀಮಾ ಕೋರೆಗಾಂವ್ ವಿಜಯ ದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪಬಣದ ಮಂಗಳೂರು ತಾಲೂಕು ಸಮಿತಿ ಹಾಗೂ ಕರಂಬಾರು ಗ್ರಾಮ ಸಮಿತಿಯ ಜಂಟಿ ಆಶ್ರಯದಲ್ಲಿ ಬುಧವಾರ ಮಂಗಳೂರು ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಕರಂಬಾರು ಅಂಬೇಡ್ಕರ್ ನಾಮ ಫಲಕದವರೆಗೆ ವಿಜಯೋತ್ಸವ -ಪಂಜಿನ ಮೆರವಣಿಗೆ ಜಾಥಾ ಮೂಲಕ ನಡೆಸಲಾಯಿತು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಪ್ರಪಂಚದಾದ್ಯಂತ ಹೆಣ್ಣು, ಹೊನ್ನು, ಮಣ್ಣು, ಅಧಿಕಾರಕ್ಕಾಗಿ ಹಲವಾರು ಭೀಕರ ಕದನಗಳು ನಡೆದಿವೆ, ನಡೆಯುತ್ತಲೇ ಇದೆ. ಆದರೆ ವ್ಯಕ್ತಿಯ ಆತ್ಮಗೌರವ, ಸ್ವಾಭಿಮಾನಕ್ಕಾಗಿ ಹಾಗೂ ಅಸ್ಪೃಶ್ಯತೆ, ಅಸಮಾನತೆ, ಅವಮಾನದ ವಿರುದ್ಧ ನಡೆದ ಏಕಮಾತ್ರ ಯುದ್ಧ ವೆಂದರೆ ಅದು ಭೀಮಾ ಕೋರೆಗಾಂವ್ ಯುದ್ಧವಾಗಿತ್ತು. ಇದರಲ್ಲಿ 22 ಜನ ಮಹರ್ ಸೈನಿಕರು ವೀರ ಮರಣ ಹೊಂದಿ ಹಲವು ಜನ ಗಾಯಗೊಳ್ಳುತ್ತಾರೆ.ಪೇಶ್ವೇ ಸೈನ್ಯವನ್ನು ಹಿಮ್ಮೆಟ್ಟಿಸಿ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಹುತಾತ್ಮ ರಾದ ಮಹರ್ ಸೈನಿಕರ ನೆನಪಿಗಾಗಿ ಬ್ರಿಟಿಷ್ ಸರಕಾರವು 1821ರಲ್ಲಿ ಕೊರೆಂಗಾವ್‌ನಲ್ಲಿ 75 ಅಡಿ ಎತ್ತರದ ಯುದ್ಧ ಸ್ಮಾರಕವನ್ನು ನಿರ್ಮಿಸಿ ಹುತಾತ್ಮರಾದ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಶೋಷಿತ ಸಮುದಾಯವು ಹಸಿವನ್ನು ಸಹಿಸು ತ್ತದೆ. ಆದರೆ ಅಸಮಾನತೆ, ಅಸ್ಪೃಶ್ಯತೆ, ಅವಮಾನವನ್ನು ಸಹಿಸಲಾರರು. ಅಂತಹ ಸಂದರ್ಭಗಳಲ್ಲಿ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡಿ ಗುರಿ ಮುಟ್ಟುವ ಛಲ ಈ ಸಮುದಾಯದಲ್ಲಿದೆ ಎಂದರು.
ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ವಿಜಯೋತ್ಸವ ದೀವಟಿಗೆಯನ್ನು ಕರಂಬಾರು ಗ್ರಾಮ ಸಂಚಾಲಕ ಗಣೇಶ್ ಅಮೀನ್‌ಗೆ ಹಸ್ತಾಂತರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು. ಸಮಾರೋಪದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡಿ ಮಾತನಾಡಿದರು.
ಮಂಗಳೂರು ತಾಲೂಕು ಸಂಚಾಲಕ ರಾಘವೇಂದ್ರ ಎಸ್. ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಸಂಚಾಲಕ ರುಕ್ಕಯ್ಯ ಕರಂಬಾರು, ದೊಂಬಯ್ಯ ಕಟೀಲ್, ದಲಿತ ಕಲಾ ಮಂಡಳಿ ಸಂಚಾಲಕ ಗಂಗಾಧರ ಪೇಜಾವರ, ಸಂಕಪ್ಪಕಾಂಚನ್, ಗ್ರಾಮ ಸಂಚಾಲಕ ಗಣೇಶ್ ಕೆಂಚಗುಡ್ಡೆ ಎಕ್ಕಾರು, ಲಿಂಗಪ್ಪಕುಂದರ್ ಪೇಜಾವರ, ಚಂದ್ರಶೇಖರ್ ಸಿದ್ಧಾರ್ಥನಗರ, ಗೀತಾ ಕರಂಬಾರು, ಸೀತಾ ಪೇಜಾವರ, ಸಾಮಾಜಿಕ ಕಾರ್ಯಕರ್ತೆ ಸಜಿನಿ ಕುಳಾಯಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ ಕೆ. ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.