ಕಲ್ಲಡ್ಕ: ಡಿ.7ರಂದು ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮವು ಡಿ.7 ರಂದು ಸಂಜೆ 6 ರಿಂದ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣದ ಆಶಕ್ತಿ ಇರುವ ಪ್ರಮುಖರು ಸೇರಿಕೊಂಡು ರಾಷ್ಟ್ರೀಯ ಚಿಂತನೆಯಡಿಯಲ್ಲಿ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆ ಇದೀಗ ಬಹಳ ಎತ್ತರಕ್ಕೆ ಬೆಳೆದಿದ್ದು, ಪ್ರಸ್ತುತ ಸುಮಾರು 3500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ, ದೇಶಕ್ಕೆ ಮಾದರಿಯ ರೀತಿಯಲ್ಲಿ ಇಲ್ಲಿನ ಕ್ರೀಡೋತ್ಸವ ನಡೆಯುತ್ತಿದೆ.
ರಾಷ್ಟ್ರೀಯ ದೃಷ್ಟಿಕೋನವನ್ಬು ಶಿಕ್ಷಣದ ಜೊತೆ ಜೊತೆಗೆ ಕೊಡುವಂತಹ ಒಂದು ಸಾರ್ಥಕ ಪ್ರಯತ್ನವನ್ನು ಕಳೆದ 4 ದಶಕಗಳಿಂದ ಶ್ರೀರಾಮ ವಿದ್ಯಾಕೇಂದ್ರ ಮಾಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗವಾದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆಯುವ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಸಂಘದ ಹಿರಿಯರು, ಪ್ರಮುಖರು ಆಗಿರುವ ಮೋಹನ್ ಭಾಗವತ್ ಅವರು ಭಾಗವಹಿಸುತ್ತಿರುವುದು ಸಂತಸ ತಂದಿದೆ, ಝಡ್ ಪ್ಲಸ್, ಪ್ಲಸ್ ಭದ್ರತೆಯಿರುವ ಮೋಹನ್ ಅವರು ಆಗಮಿಸುವ ಹಿನ್ನೆಲೆಯಲ್ಲಿ ಕ್ರೀಡೋತ್ಸವದ ಅವಧಿಯನ್ನು ಒಂದೂವರೆ ಗಂಟೆಗೆ ಮೀಸಲು ಮಾಡಲಾಗಿದೆ. ಆದರೆ ಮಕ್ಕಳ ಎಲ್ಲಾ 19 ಪ್ರದರ್ಶನಗಳು ಪ್ರತಿ ವರ್ಷದಂತೆ ನಡೆಯಲಿದೆ. ಮಕ್ಕಳ ವಿವಿಧ ರೀತಿಯ ಪ್ರದರ್ಶನವನ್ನು ವೀಕ್ಷಣೆ ನಡೆಸಿದ ಬಳಿಕ ಮೋಹನ್ ಭಾಗವತ್ ಜೀ ಅವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಕ್ರೀಡೋತ್ಸವದಲ್ಲಿ ಶಿಶುನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ದ, ದೀಪಾರತಿ, ಯೋಗಾಸನ, ನೃತ್ಯ ಭಜನೆ, ಮಲ್ಕಕಂಬ, ತಿರುಗುವ ಮಲ್ಲಕಂಬ, ನೃತ್ಯ ವೈವಿಧ್ಯ, ಬೆಂಕಿಸಾಹಸ, ಚಕ್ರಸಮತೋಲನ, ಕಾಲ್ಚಕ್ರ, ಕೂಪಿಕಾ ಹೀಗೆ ಒಟ್ಟು 19 ಪ್ರದರ್ಶನಗಳು ಶಾಲಾ ಮಕ್ಕಳಿಂದ ನಡೆಯಲಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾದವ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ನ್ಯಾಯವಾದಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.