ಹರೇಕಳ; ನ್ಯಾಯಕ್ಕಾಗಿ ಗ್ರಾಮಸ್ಥರ ಮನವಿ
ಕೊಣಾಜೆ: ನೀರಿನ ವಿಚಾರಕ್ಕೆ ಸಂಬಂಧಿಸಿ ಹರೇಕಳ ಗ್ರಾಮದಲ್ಲಿ ನಡೆದ ಹಲ್ಲೆ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿರುವ ಎಂಎಲ್ ಸಿ ವಿರುದ್ಧ ಪ್ರಕರಣ ದಾಖಲಿಸು ವಂತೆ ಆಗ್ರಹಿಸಿ ಸೋಮವಾರ ಕೊಜಪಾಡಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ತೆರಳಿ ಮನವಿ ಮಾಡಿದ್ದಾರೆ.
ಹರೇಕಳ ಗ್ರಾಮದ ಎರಡನೇ ವಾರ್ಡ್ ಕೊಜಪಾಡಿ ಸೈಟ್ ನಲ್ಲಿ ಶುಕ್ರವಾರ ನೀರು ಆಪರೇಟರ್ ಹಾಗೂ ಸ್ಥಳೀಯ ನಿವಾಸಿ ಶರತ್ ನಡುವೆ ಹಲ್ಲೆ ಪ್ರಕರಣ ನಡೆದು ಕೊಣಾಜೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು. ಅಲ್ಲದೆ ಗ್ರಾಮ ಪಂಚಾಯಿತಿಯ ಸ್ಥಳೀಯ ಸದಸ್ಯ ಹಾಗೂ ಇತರರ ಮೇಲೂ ಕೇಸು ದಾಖಲಿಸಲಾಗಿತ್ತು.
ಈ ಘಟನೆ ನಡೆದ ಬಳಿಕ ಸ್ಥಳೀಯ ವಾರ್ಡ್ ನಲ್ಲಿ ನೀರು ಆಪರೇಟರ್ ಇಲ್ಲದೆ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಗ್ರಾಮ ಪಂಚಾಯಿತಿಗೆ ದೌಡಾಯಿಸಿ ಸಮಸ್ಯೆ ಪರಿಹರಿಸಲು ಹಾಗೂ ಘಟನೆಗೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದು ಅವರ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದರು.
ನಮಗೆ ಎಲ್ಲರೂ ಸಮಾನರು, ಸ್ಥಳೀಯ ಭಾಗದಲ್ಲಿ ಎಲ್ಲಾ ಇತರ ಧರ್ಮೀಯರು ಸೌಹಾರ್ದದಿಂದ ಇದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಪ್ರಚೋದನಾಕಾರಿ ಹೇಳಿಕೆ ನೀಡಿ ಶಾಂತಿ ಕದಡುವ ಪ್ರಯತ್ನ ಮಾಡಿ ದ್ದಾರೆ ಅವರ ವಿರುದ್ಧ ಗ್ರಾಮ ಪಂಚಾಯಿತಿಯಿಂದ ದೂರು ದಾಖಲಿಸಬೇಕು ಮನವಿ ಆಗ್ರಹಿಸಿದರು.
ಶುಕ್ರವಾರದಿಂದ ನೀರಿನ ಸಮಸ್ಯೆಯಾಗಿದ್ದು ತಕ್ಷಣ ಸರಿಪಡಿಸುತ್ತೇವೆ. ಪ್ರಕರಣದ ಕೂಲಂಕುಶ ತನಿಖೆ ನಡೆಸುವಂತೆ ಎಸಿಪಿಗೆ ಮನವಿ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮನವಿ ಸ್ವೀಕರಿಸಿದರು.
ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಅಬ್ದುಲ್ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ.ಬಶೀರ್ ಜೊತೆಗಿದ್ದರು. ಸ್ಥಳೀಯ ಪ್ರಮುಖರಾದ ಶಬನಾ, ಫೌಝಿಯಾ, ಸಕೀನಾ, ನಸ್ಲೀನ, ಆಯಿಶಾ, ಝೀನತ್, ಜಮೀಲಾ, ಝೊಹರಾ, ಸುಲ್ತಾನ್, ಸತ್ತಾರ್, ಬಶೀರ್, ಇಬ್ರಾಹಿಂ, ರಫೀಕ್, ನಿಸಾರ್, ನಝೀರ್, ರಿಯಾಝ್ ಇನ್ನಿತರರು ಉಪಸ್ಥಿತರಿದ್ದರು.