ಅಡಿಕೆಯ ಸಮಗ್ರ ಸಂಶೋಧನೆಗೆ ಬಜೆಟ್‌ನಲ್ಲಿ ನಿಧಿ ಹಂಚಿಕೆಗೆ ಕೇಂದ್ರಕ್ಕೆ ಕ್ಯಾಂಪ್ಕೊ ಮನವಿ
ಮಂಗಳೂರು: ಅಡಿಕೆಯ ಸುರಕ್ಷತೆ ಮತ್ತು ಅದರ ಕ್ಯಾನ್ಸರ್ ರೋಗ ಶಮನಗೊಳಿಸುವ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಮುಂಬರುವ ಬಜೆಟ್ ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.
ಅಡಿಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಿಕೆಯು ಮಹತ್ತರ ಪಾತ್ರವನ್ನು ವಹಿಸಿರುವುದರ ಕುರಿತು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ಕ್ಯಾಂಪ್ಕೊ ಅಧ್ಯಕ್ಷರು ವಿವರಿಸಿದ್ದಾರೆ. ಭಾರತದಲ್ಲಿ ಸುಮಾರು 9.55 ಲಕ್ಷ ಹೆಕ್ಟೇರ್ ಗಳಿಗೆ ಅಡಿಕೆ ಕೃಷಿ ವಿಸ್ತರಿಸಿದ್ದು, ವಾರ್ಷಿಕವಾಗಿ 14 ರಿಂದ 18 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಡಿಕೆಯ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರಕಾರ ಜಿಎಸ್ಟಿ ಪದ್ಧತಿ ಜಾರಿ ಗೊಳಿಸಿದಂದಿನಿಂದ ಈವರೆಗೆ ಬರೇ ಕ್ಯಾಂಪ್ಕೊ ಒಂದೇ ಸಂಸ್ಥೆ ಸುಮಾರು ೬೫೦ ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸುತ್ತಿದೆ ಎಂದು ಕೂಡ್ಗಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್ ಕಾರಕವೆಂದು ವರ್ಗೀಕರಿಸಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಅಡಿಕೆಯನ್ನು ಗುಟ್ಕ ಮತ್ತು ತಂಬಾಕಿನ ಜೊತೆ ಬಳಸುತ್ತಿರುವ ಕಾರಣದಿಂದ ಅದನ್ನು ಕ್ಯಾನ್ಸರ್‌ಕಾರಕವೆಂದು ಪರಿಗಣಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ನ್ಯಾಯೋಚಿತವಾಗಿಲ್ಲವೆಂದು ದಾಖಲೆ ಸಮೇತ ಸಾಬೀತು ಪಡಿಸಲು, ಕ್ಯಾಂಪ್ಕೊ ಹಲವು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಸಿರುವ ಸಂಶೋಧನಾ ವರದಿಗಳನ್ನು ಸಲ್ಲಿಸಿದೆ. ಎಲ್ಲಾ ವರದಿಗಳೂ ಅಡಿಕೆಯ ಉಪಯೋಗ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರ್‌ನ್ನು ಶಮನಗೊಳಿಸುವ ಗುಣಗಳನ್ನು ಹೊಂದಿರುವ ಬಗ್ಗೆ ರುಜುವಾತು ಪಡಿಸಿವೆ. ಕೆಲವೊಂದು ಅಡಿಕೆಯ ಉಪಯೋಗದ ಬಗ್ಗೆ ನ್ಯಾಯೋಚಿತ ಮತ್ತು ವಸ್ತುನಿಷ್ಠ ಸಂಶೋಧನೆ ನಡೆಸಿ, ಅದರ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ದಾಖಲೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಸಬೇಕು. ಆಗ ಲಕ್ಷಾಂತರ ಬೆಳೆಗಾರರ ಬದುಕಿಗೆ ಭರವಸೆಯನ್ನು ಕೇಂದ್ರ ಸರಕಾರ ನೀಡಿದಂತಾಗುತ್ತದೆ. ಸಂಶೋಧನೆಗೆ ಬೇಕಾದ ನಿಧಿಯನ್ನು ಮುಂದಿನ ಬಜೆಟ್‌ನಲ್ಲಿ ಹಂಚಿಕೆ ಮಾಡುವಂತೆ ಕಿಶೋರ್ ಕುಮಾರ್ ಕೊಡ್ಗಿಯವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.