ಫೆಂಗಲ್ ಚಂಡಮಾರುತದ ಪರಿಣಾಮ: ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ
ಮಂಗಳೂರು, ಡಿ.2: ತಮಿಳ್ನಾಡು ಮತ್ತು ಪುದುಚೇರಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯ ಮೇಲಾಗಿವೆ. ಸೋಮವಾರ ದ.ಕ.ಜಿಲ್ಲಾದ್ಯಂತ ಭಾರೀ ಮಳೆಯಾಗಿದೆ.
ಹವಾಮಾನ ಇಲಾಖೆಯು ಹೊರಡಿಸಿದ ಪ್ರಕಟನೆಯಂತೆ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡಕವಿದ ವಾತಾವರಣವಿತ್ತು. ಅಪರಾಹ್ನ 4ರ ಬಳಿಕ ಮಳೆಯು ತನ್ನ ಅಬ್ಬರ ತೋರಿಸಿತು.
ಮಂಗಳೂರು, ಉಳ್ಳಾಲ, ಬಂಟ್ವಾಳ, ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಸುಬ್ರಹ್ಮಣ್ಯ, ಮುಲ್ಕಿ, ಗುರುಪುರ, ಧರ್ಮಸ್ಥಳ, ಚಾರ್ಮಡಿ ಸಹಿತ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಸಂಜೆ 5ರ ಬಳಿಕ ನಗರ ಸಹಿತ ಹೊರವಲಯದಲ್ಲಿ ಭಾಗಶಃ ಕತ್ತಲು ಆವರಿಸಿತ್ತು. ವಸ್ತುಶಃ ಮಳೆಗಾಲದ ಅನುಭವ ವ್ಯಕ್ತವಾಯಿತು. ನಗರದಲ್ಲಂತೂ ಅರೆಬರೆ ಕಾಮಗಾರಿಯಿಂದಾಗಿ ಮಳೆನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ಹರಿಯಿತು. ಹೊರವಲಯದ ಉಪನಗರಗಳಲ್ಲಿ ಕೂಡ ಮಳೆನೀರು ರಸ್ತೆಯಲ್ಲೇ ಹರಿದ ಪರಿಣಾಮ ವಾಹನಿಗರು ಸಮಸ್ಯೆ ಎದುರಿಸಿದರು. ಜನಸಾಮಾನ್ಯರು ಪರದಾಡುವುದು ಕಂಡು ಬಂತು.
ಆರೆಂಜ್ ಅಲರ್ಟ್: ಹವಾಮಾನ ಇಲಾಖೆಯು ದ.ಕ.ಜಿಲ್ಲೆಯಲ್ಲಿ ಮಂಗಳವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲೂ ತೀವ್ರ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಾಗೂ ಎಲ್ಲಾ ಜಾನುವಾರುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ದ.ಕ.ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ: ಮಳೆಗಾಲದಲ್ಲಿ ಅನುಸರಿಸುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಕ್ಷಣದಿಂದಲೇ ಸಿದ್ದರಾಗಬೇಕು. ಆಯಾ ತಹಶೀಲ್ದಾರರು ಈ ಬಗ್ಗೆ ಮೇಲ್ವಿಚಾರಣೆ ವಹಿಸಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ
ಹವಾಮಾನದ ಮುನ್ಸೂಚನೆಯಂತೆ ಡಿ.6ರವರೆಗೆ ಅರಬಿ ಸಮುದ್ರವು ಪ್ರಕ್ಷುಬ್ದವಾಗಿರುವ ಕಾರಣ ಅನಾಹುತ ತಡೆಯುವ ಸಲುವಾಗಿ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಕೆಯ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
*ಶಾಲೆ, ಪಿಯು ಕಾಲೇಜುಗಳಿಗೆ ರಜೆ: ಫೆಂಗಲ್ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿ ಸಿದ ಹಿನ್ನೆಲೆಯಲ್ಲಿ ಡಿ.3ರಂದು (ಮಂಗಳವಾರ) ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಆದೇಶ ಹೊರಡಿಸಿದ್ದಾರೆ.
ಸ್ಪೀಕರ್ ಖಾದರ್ ಸೂಚನೆ
ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ಭಾರೀ ಮಳೆ ಸುರಿದ ಕಾರಣ ಮುಂಜಾಗೃತಾ ಹಾಗೂ ರಕ್ಷಣಾ ಕಾರ್ಯಾ ಚರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ದ.ಕ.ಜಿಲ್ಲಾಧಿಕಾರಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ಈಗಾಗಲೆ ಜಿಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದು, ಎನ್‌ಡಿಆರ್‌ಎಫ್ ಸಹಿತ ರಕ್ಷಣಾ ತಂಡಗಳನ್ನು ಸನ್ನದ್ಧ ಗೊಳಿಸಲು ಸೂಚನೆ ನೀಡಿದ್ದೇನೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜ ನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸೂಚನೆ ನೀಡಿರುವ ಸ್ಪೀಕರ್ ಯು.ಟಿ.ಖಾದರ್ ಜನಸಾಮಾನ್ಯರೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.