ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು : ಸಚಿವ ರಹೀಂ ಖಾನ್

Update: 2023-09-06 16:49 GMT

ಮಂಗಳೂರು, ಸೆ.6: ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಸರಕಾರಿ ಆಸ್ಪತ್ರೆ, ಬಸ್‌ಸ್ಟಾಂಡ್ ಸಮೀಪ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಹಿಂದೆ ರಾಜ್ಯದಲ್ಲಿ ಒಂದೇ ರೀತಿಯ ಆಹಾರದ ಮೆನು ಇತ್ತು. ಮುಂದೆ ಸ್ಥಳೀಯ ಆಹಾರ ಮೆನುವಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಿಸಿಟಿವಿ, ಬಿಲ್ಲಿಂಗ್ ಮೆಶಿನ್‌ನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಅಳವಡಿಸಲಾಗುವುದು. ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಇಂದು ಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ಕೆಲವು ನ್ಯೂನ್ಯತೆಗಳು ಬೆಳಕಿಗೆ ಬಂದಿದೆ. ಬಿಲ್ಲಿಂಗ್ ಮೆಶಿನ್ ಇಲ್ಲ, ಸಿಸಿಟಿವಿ ಮತ್ತು ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ ಎಂದರು.

ಹೊಸ ಇಂದಿರಾ ಕ್ಯಾಂಟೀನ್ ಗೆ ಒಂದು ತಿಂಗಳ ಒಳಗಾಗಿ ಟೆಂಡೆರ್ ಕರೆಯಲಾಗುವುದು. ಈಗಾಗಲೇ ಅಸ್ಥಿತ್ವದಲ್ಲಿರುವ ಇಂದಿರಾ ಕ್ಯಾಂಟೀನ್ಗೂ ಟೆಂಡರ್ ಕರೆಯಲಾಗುವುದು. ಸರಕಾರದ ಆದೇಶ ಜಾರಿಯಾಗುವ ತನಕ ಹಿಂದಿನಂತೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು..

ಬಡ ಜನರು ಹಸಿವೆಯಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲಾಗಿದೆ ಸರಕಾರ ಸಬ್ಸಿಡಿ ಹಣವನ್ನು ಸಹ ಹೆಚ್ಚಿಸಿದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನಿಗದಿತ ಪ್ರಮಾಣದಲ್ಲಿ ಆಹಾರವನ್ನು ವಿತರಿಸಬೇಕು ಎಂದರು.

ಕಳೆದ 5 ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಸರಿಯಾಗಿ ಆಗದೆ ಇರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ ಇವುಗಳ ದುರಸ್ತಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು. ಪೌರಾಡಳಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 500 ಹುದ್ದೆಗಳ ಭರ್ತಿ ಎರಡು ತಿಂಗಳಲ್ಲಿ ನಡೆಯಲಿದೆ. ಪೌರ ಕಾರ್ಮಿಕರ ನೇಮಕದ ಅಧಿಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

*ಇಬ್ಬರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್: ಪ್ರಗತಿ ಪರಿಶೀಲನಾ ವೇಳೆ ಸಮರ್ಪಕ ಮಾಹಿತಿ ನೀಡದ ಮೂಡಬಿದಿರೆಯ ಪುರಸಭೆಯ ಮುಖ್ಯಾಧಿಕಾರಿ ಶಿವನಾಯಕ್ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ಮಹಾವೀರ ಎಂಬವರಿಗೆ ಶೋಕಾಸ್ ನೋಟಿಸ್ ನೀಡಲು ಸಚಿವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.

15ನೇ ಹಣಕಾಸು ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡುವುದರೊಂದಿಗೆ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಬೇಕು ಎಂದ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಿರಿಸುವ ಅನುದಾನದಲ್ಲಿ ಅವರಿಗೆ ವೈಯಕ್ತಿಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಆದರೆ ಕೆಲವೊಂದು ಸ್ಥಳೀಯ ಸಂಸ್ಥೆ ಗಳಲ್ಲಿ ಇದರ ಬಳಕೆ ಮಾಡದೆ ಇರುವುದು ಕಂಡು ಬಂದಿದೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಸರಿಯಾದ ಕಾರಣ ಇಲ್ಲದೆ ಇದ್ದಲ್ಲಿ ಅವರನ್ನು ಅಮಾನತು ಮಾಡುವಂತೆ ಅವರು ಸೂಚಿಸಿದರು.

*ಜನ ಸಾಮಾನ್ಯರ ಅಹವಾಲುಗಳಿಗೆ ಕೂಡಲೆ ಸ್ಪಂದಿಸಬೇಕು: ಸ್ಥಳೀಯ ಸಂಸ್ಥೆಗಳಿಗೆ ಕೆಲಸ ಕಾರ್ಯಗಳನ್ನು ಹರಿಸಿ ಬರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿ ನಿಯಮ ಅನುಸಾರ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಸರಕಾರ ಬದಲಾಗಿದೆ. ಅದರಂತೆ ನಿಮ್ಮಲ್ಲೂ ಬದಲಾವಣೆಯಾಗಬೇಕು. ಅಧಿಕಾರಿಗಳಿಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರೋತ್ತಾನ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ನಗರೋತ್ತಾನ ನಾಲ್ಕನೆಯ ಹಂತದ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ಅದನ್ನು ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಅನುಮತಿ ಪಡೆಯಲು ಸರಕಾರಕ್ಕೆ ಕಳುಹಿಸಿಕೊಡಬೇಕು. ಒಂದೊಮ್ಮೆ ಅವುಗಳಲ್ಲಿ ತಿದ್ದುಪಡಿ ಇದ್ದಲ್ಲಿ ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿ ಕಳುಹಿಸಿ ಕೊಡಬೇಕು ಎಂದರು.

ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಬಿಲ್ ಮಾಡಲು ಅನುಮತಿ ನೀಡಬೇಕು ಎಂದು ಸಲಹೆ ನೀಡಿದರು. ಆಸ್ತಿ ತೆರಿಗೆಯಲ್ಲಿ ಹೊಸ ಶುಲ್ಕವನ್ನು ಸರಕಾರ ಜಾರಿಗೆ ತಂದಿದೆ. ಇದನ್ನು ಅನುಷ್ಠಾನಗೊಳಿಸಬೇಕು ನೀರಿನ ಶುಲ್ಕ ಸಂಗ್ರಹದ ಪ್ರಗತಿ ಇನ್ನು ಹೆಚ್ಚು ಸಾಧಿಸಬೇಕು , ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹವು ಶೇ.65.84 ಆಗಿದೆ. ಬಂಟ್ವಾಳದಲ್ಲಿ ಶೇ.82 ಕ್ಕಿಂತ ಹೆಚ್ಚು ಹಾಗೂ ಪುತ್ತೂರಿನಲ್ಲಿ ಶೇ.52ರಷ್ಟು ಆಗಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 75ರಷ್ಟು, ಗುರಿ ಸಾಧಿಸಬೇಕು. ಆನ್ ಲೈನ್ ತೆರಿಗೆ ಸಂಗ್ರಹಕ್ಕೆ ಹೆಚ್ಚು ಹೊತ್ತು ನೀಡಬೇಕು ನಿಗದಿತ ತೆರಿಗೆ ಸಂಗ್ರಹವಾಗದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗು ವುದು ಹಾಗೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ವಾಗುವ ಸಾಧ್ಯತೆ ಇದೆ. ಈಗಿನಿಂದಲೇ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ನೀರಿನ ಮಿತಿ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಸ್ಥಳೀಯ ಸಂಸ್ಥೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ತಪ್ಪಿದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಸಂಗ್ರಹ ಸಂದರ್ಭದಲ್ಲಿ ಬೇರ್ಪಡಿಸಿ ಸಂಗ್ರಹಿಸಿದ ಒಣ ಕಸವನ್ನು ಸಿಮೆಂಟ್ ಕಾರ್ಖಾನೆಗಳಿಗೆ ನೀಡಿದಲ್ಲಿ ಹಾಗೂ ಹಸಿ ಕಸದಿಂದ ಗೊಬ್ಬರ ತಯಾರಿಕೆ ಮಾಡಿದಲ್ಲಿ ಸಂಘ ಸಂಸ್ಥೆಗಳಿಗೆ ಆದಾಯ ಸಿಗುತ್ತದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಈಗಾಗಲೇ ಮುಲ್ಕಿಯ ಸ್ಥಳೀಯ ಸಂಸ್ಥೆಯಲ್ಲಿ ನಿರ್ವಹಣೆ ಘಟಕವನ್ನು ಸ್ಥಾಪಿಸಲಾಗಿದೆ. ಇದೇ ರೀತಿ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿಯೂ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.

ವ್ಯಾಪಾರ ಪರವಾನಿಗೆಯನ್ನು ಪ್ರತಿ ವರ್ಷ ನವೀಕರಣಗೊಳಿಸಬೇಕು ಕೆಲವು ಐದು ವರ್ಷಗಳಿಗೆ ನವೀಕರಿಸಲು ಅವಕಾಶವಿದೆ. ಆನ್‌ಲೈನ್ ಪೋರ್ಟಲ್ ನಲ್ಲಿಯೂ ನವೀಕರಿಸಬಹುದಾಗಿದೆ ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಎಂದರು.

ಜಾಹೀರಾತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಪ್ರದರ್ಶಿಸಲು ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ನಿರ್ಣಯವನ್ನು ಕೈಗೊಂಡು ನಿಯಮವನ್ನು ರೂಪಿಸಿಕೊಳ್ಳಬೇಕು ಒಂದೊಮ್ಮೆ ಅನುಮತಿ ತೆಗೆದುಕೊಳ್ಳದೆ ಜಾಹೀರಾತುಗಳನ್ನು ಪ್ರದರ್ಶಿಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಪೌರಾಡಳಿತ ಇಲಾಖೆಯ ನಿರ್ದೇಶಕಿ ಮಂಜುಳಾಶ್ರೀ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಹಾಗೂ ಮಂಗಳೂರು ಡಿಯುಡಿಸಿ ಯೋಜನಾ ನಿರ್ದೇಶಕ ಅಭಿಷೇಕ್ ವಿ.ಎಸ್. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News