ಅ.4ರಿಂದ ಎಟ್ಟಿಕ್ಕುಳಂನಲ್ಲಿ ಉರೂಸ್ ಮುಬಾರಕ್
ಮಂಗಳೂರು, ಅ.2: ಉಳ್ಳಾಲ ತಂಙಳ್ ಎಂದು ಖ್ಯಾತರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ‌್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ 11ನೇ ವರ್ಷದ ಉರೂಸ್ ಮುಬಾರಕ್ ಅ.4, 5 ಮತ್ತು 6ರಂದು ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮದನೀಸ್ ಕೇಂದ್ರ ಸಮಿತಿ ನಾಯಕ ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು, ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸಂಗಮಗಳು, ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಇಂಡಿಯಾನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್, ರಈಸುಲ್ ಉಲಮಾ ಸುಲೈಮಾನ್ ಉಸ್ತಾದ್, ಕುಂಬೋಳ್ ತಂಙಳ್, ಬದ್ರುಸ್ಸಾದಾತ್ ಖಲೀಲ್ ತಂಙಳ್, ಮಾಣಿ ಉಸ್ತಾದ್, ಕೋಟೂರು ಉಸ್ತಾದ್, ಪೊನ್ಮಳ ಉಸ್ತಾದ್, ಪೇರೋಡ್ ಉಸ್ತಾದ್, ಸ್ಪೀಕರ್ ಯು.ಟಿ.ಖಾದರ್, ಯೆನೆಪೋಯ ಅಬ್ದುಲ್ಲ ಕುಂಞಿ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಕೂರತ್ ತಂಙಳ್ ಪುತ್ರ ಸಯ್ಯಿದ್ ಮಸ್‌ಊದ್ ತಂಙಳ್ ಅಲ್ ಬುಖಾರಿ ಕೂರತ್, ಕಾವಲಕಟ್ಟೆ ಹಝ್ರತ್, ಮುರ ತಂಙಳ್, ಸಾದಾತ್ ತಂಙಳ್, ಉಜಿರೆ ಇಸ್ಮಾಯಿಲ್ ತಂಙಳ್ ಮತ್ತಿತರ ಪ್ರಮುಖ ವಿದ್ವಾಂಸರು, ರಾಜಕೀಯ, ಸಾಮಾಜಿಕ ನಾಯಕರು ಪಾಲ್ಗೊಳ್ಳಲಿದ್ದಾರೆ.
ಅ.4ರಂದು ಮಧ್ಯಾಹ್ನ ಸಯ್ಯಿದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಧ್ವಜಾರೋಹಣಗೈಯುವ ಮೂಲಕ ಆರಂಭ ಗೊಳ್ಳಲಿರುವ ಉರೂಸ್ ಅ.6ರಂದು ಮಗ್ರಿಬ್‌ನ ನಂತರ ನಡೆಯುವ ಸಮಾಪನ ಸಮ್ಮೇಳನದೊಂದಿಗೆ ಸಮಾಪನಗೊಳ್ಳಲಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮದನೀಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ, ಉರೂಸ್ ಪ್ರಚಾರ ಸಮಿತಿಯ ಎಂ.ಎಂ.ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಅಝೀಜ್ ಎಚ್ ಕಲ್ಲು, ಉಪಸ್ಥಿತರಿದ್ದರು.