ಅ.13: ಜಾತ್ರೆ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಖಂಡಿಸಿ ಪ್ರತಿಭಟನೆ

Update: 2023-10-12 17:07 GMT

ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಿರ್ದಿಷ್ಟ ಸಮುದಾಯದ ಜಾತ್ರೆ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಜಾಗ ನಿರಾಕರಣೆ ಮಾಡಿದ ಕ್ರಮವನ್ನು ಖಂಡಿಸಿ ದ.ಕ. ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಸಮನ್ವಯ ಸಮಿತಿಯ ವತಿಯಿಂದ ಅ.13ರಂದು ಬೆಳಗ್ಗೆ 10.45ಕ್ಕೆ ನಗರದ ಮೈದಾನ ರಸ್ತೆಯ ಬದಿಯ ಪುರಭವನದ ದ್ವಾರದ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಜಾತ್ರೆ ವ್ಯಾಪಾರಸ್ಥರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆ ನಡೆಸಲು ಅವಕಾಶ ಕೋರಿ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕಾದು ಕುಳಿತರೂ ಮಾತನಾಡುವ ಸೌಜನ್ಯ ತೋರಿಸಲಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಸಂಘಿ ಮನಸ್ಥಿತಿಯ ಅಧಿಕಾರಿಗಳ ದರ್ಬಾರ್ ನಡೆಯುತ್ತಿರುವುದು ವಿಪರ್ಯಾಸ. ಜಾತ್ಯತೀತ ಸರಕಾರ ಬರಲಿ, ಕೋಮುವಾದಿಗಳಿಗೆ ಸೋಲಾಗಲಿ ಎಂದು ಪ್ರತಿಫಲ ಅಪೇಕ್ಷೆ ಇಲ್ಲದೆ ಬೆವರು ಹರಿಸಿದ ನಮಗೆ ಇದೀಗ ಒಳ್ಳೆಯ ಅನುಭವ ಆಗುತ್ತಿದೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಬಗ್ಗೆ ಲಿಖಿತವಾಗಿ ಕೊಡಿ ಅಂತ ಕೇಳಿದಾಗ ಹೊರಗಡೆ ಹೋಗಲು ಸೂಚಿಸಿದ್ದಾರೆ. ಹಾಗಾಗಿ ಅನುಮತಿ ಕೊಡದಿದ್ದರೂ ಅ.13ರಂದು ಬೆಳಗ್ಗೆ ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News