ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಯತ್ನ ಆರೋಪ: ರೌಡಿ ಶೀಟರ್ ಆಕಾಶಭವನ ಶರಣ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಗರ ಅಪರಾಧ ಪತ್ತೆದಳ (ಸಿಸಿಬಿ)ದ ಪೊಲೀಸರ ಮೇಲೆ ರೌಡಿಶೀಟರ್ ಆಕಾಶ ಭವನ ಶರಣ್ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ಪ್ರಕರಣಗಳಲ್ಲಿ ಅರೆಸ್ಟ್ ವಾರೆಂಟ್ ಎದುರಿಸುತ್ತಿರುವ ಆಕಾಶಭವನ ಶರಣ್ ಜ.2ರಂದು ರಾತ್ರಿ ನಗರದ ಮೇರಿಹಿಲ್ ಬಳಿ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದರು. ಆವಾಗ ಆರೋಪಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲ್ಲಲು ಯತ್ನಿಸಿದ್ದು, ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ.
ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸಹಿತ ಐದು ಮಂದಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶ ಭವನ ಶರಣ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆ ಪ್ರಕಟವಾಗಿರಲಿಲ್ಲ. ಉಳಿದ ಐದು ಮಂದಿ ಜೈಲು ಸೇರಿದ್ದರೆ, ರೌಡಿ ಶೀಟರ್ ಶರಣ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ಹಫ್ತಾ ಸಹಿತ 21 ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.