ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಕ್ರಮ: ರೇವತಿ

Update: 2024-08-12 14:28 GMT

ಮಂಗಳೂರು, 12: ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಮಂಗಳೂರು ಬಂದರ್ ದಕ್ಕೆಯ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಮಂಗಳೂರು ಮೀನುಗಾರಿಕಾ ಬಂದರಿನ ಮಿನುಗಾರಿಕೆ ಉಪ ನಿರ್ದೇಶಕಿ ರೇವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿನಿತ್ಯ ಈ ಬಂದರ್‌ನಲ್ಲಿ ಸುಮಾರು 10 ಸಾವಿರ ಮಂದಿ ಮೀನುಗಾರಿಕಾ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಸುಮಾರು 200-300ರಷ್ಟು ಮೀನುಗಾರಿಕಾ ವಾಹನಗಳು ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ 3ನೆ ಹಂತದ ಕಾಮಗಾರಿ ಪ್ರಗತಿಯಲ್ಲಿರುವುದರಿಂದ 1 ಮತ್ತು 2ನೆ ಹಂತದ 6 ಎಕರೆ ಜಾಗದಲ್ಲಿ ಬೋಟ್‌ಗಳಿಂದ ಮೀನುಗಳನ್ನು ಖಾಲಿ ಮಾಡು ವುದು, ಮೀನು ಹರಾಜು ಹಾಕುವುದು, ಹರಾಜಾದ ಮೀನುಗಳನ್ನು ವಾಹನಗಳಿಗೆ ಲೋಡ್ ಮಾಡುವುದು, ದೋಣಿಗಳಿಗೆ ಡೀಸೆಲ್, ನೀರು, ಮಂಜುಗಡ್ಡೆ ಪೂರೈಕೆ ಇತ್ಯಾದಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಂದರಿನ ಒಳಚರಂಡಿ ಮತ್ತು ಶೌಚಾಲಯಗಳು ಹಳೆಯದಾಗಿದೆ. ಅದನ್ನು ಆಧುನೀಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಬಂದರ್‌ನ ಸ್ವಚ್ಛತೆ ಮತ್ತು ವಾಹನಗಳ ನಿರ್ವಹಣೆಯ ಬಗ್ಗೆ ಕ್ರಮ ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 3ನೆ ಹಂತದ ಉಳಿಕೆ ಕಾಮಗಾರಿಯು 49.5 ಕೋ.ರೂ. ಮಂಜೂರಾತಿಯೊಂದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಈ ಕಾಮಗಾರಿ ಪೂರ್ತಿಗೊಂಡಲ್ಲಿ ಬಂದರಿನ ಇಕ್ಕಟ್ಟಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೋಡರ್ನೈಝೇಶನ್ ಆಫ್ ಫಿಶಿಂಗ್ ಹಾರ್ಬಾರ್ ಕಾಮಗಾರಿಗೆ 37.5 ಕೋ. ರೂ. ಮಂಜೂರಾತಿ ದೊರೆತಿದ್ದು, ಮೀನುಗಾರಿಕಾ ಬಂದರ್‌ನ ಓಲ್ಡ್ ವ್ಹಾರ್ಫ್, 1ನೆ ಹಾಗೂ 2ನೆ ಹಂತದ ಆಧುನೀಕರಣಗೊಳಿಸಲು ಸಿಆರ್‌ಝೆಡ್ ಅನುಮತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಶೌಚಾಲಯ, ಒಳಚರಂಡಿ, ಶುಚಿತ್ವ ಮತ್ತು ಭದ್ರತೆ ಬಗ್ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮಿನುಗಾರಿಕೆ ಉಪನಿರ್ದೇಶಕಿ ರೇವತಿ ತಿಳಿಸಿದ್ದಾರೆ.

3ನೆ ಹಂತದ ತೇಲುವ ಜಟ್ಟಿಯನ್ನು ನಾಡದೋಣಿಗಳಿಗೆ ಲಂಗರು ಹಾಕಲು 5.94 ಕೋ.ರೂ. ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 3.90 ಕೋ.ರೂ. ವೆಚ್ಚದಲ್ಲಿ ಡ್ರಜ್ಜಿಂಗ್ ಕಾಮಗಾರಿಯನ್ನು 1,2,3ನೆ ಹಂತದಲ್ಲಿ ಕೈಗೊಳ್ಳಲಾಗಿದೆ.

*ಕುಳಾಯಿ ಮೀನುಗಾರಿಕಾ ಬಂದರನ್ನು 196.51 ಕೋ.ರೂ.ಗೆ ಮಂಜೂರಾತಿ ದೊರೆತಿದೆ. ಇದರ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಬಂದರು ನಿರ್ಮಾಣಗೊಂಡ ಬಳಿಕ ಮಂಗಳೂರು ಬಂದರ್‌ನಲ್ಲಿ ದೋಣಿಗಳ ಸಂದಣಿ ಕಡಿಮೆಯಾಗಿ ನಿಲುಗಡೆಗೆ ಅನುಕೂಲವಾಗಲಿದೆ.

*ಬೆಂಗ್ರೆಯಲ್ಲಿ 3.37 ಕೋ.ರೂ. ವೆಚ್ಚದಲ್ಲಿ 150 ದೋಣಿಗಳಿಗೆ ತಂಗಲು ನಾಡದೋಣಿ ತಂಗುದಾಣ ನಿರ್ಮಿಸಲಾಗಿದ್ದು, ನಾಡದೋಣಿಗಳ ನಿಲುಗಡೆಗೆ ಅನುಕೂಲವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News