ಅಲೆಮಾರಿ ಶಿಳ್ಳೆಕ್ಯಾತ ಬುಡಗಟ್ಟು ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ
ಮಂಗಳೂರು: ನೇತ್ರಾವತಿ ಮತ್ತು ಗುರುಪುರ ನದಿ ತೀರ ಹಾಗೂ ತೋಕೂರಿನ ೭ ಪ್ರದೇಶದಲ್ಲಿರುವ ಶಿಳ್ಳೆಕ್ಯಾತ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ನಿಯೋಗವು ಅಪರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಟೆಂಟ್‌ಗಳಲ್ಲಿ ವಾಸಿಸುವ ಈ ಕುಟುಂಬಗಳು ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಅಲೆಮಾರಿ ಸಮುದಾಯಗಳ ಜಾತಿಯ ಗುರುತಿಸುವಿಕೆಯ ಸಮಸ್ಯೆ ಪರಿಹರಿಸಲು ಅಲೆಮಾರಿ ಬುಡಕಟ್ಟುಗಳ ಶಾಶ್ವತವಾದ ಆಯೋಗ ರಚಿಸಬೇಕು. ಜಿಲ್ಲಾಡಳಿತವು ವಿವಿಧೆಡೆ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಸರ್ವೆ ನಡೆಸಬೇಕು. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಆರೋಗ್ಯ ಕಾರ್ಡು, ಮತ್ತು ಇತರೆ ಗುರುತಿನ ಕಾರ್ಡುಗಳನ್ನು ವಿತರಿಸಬೇಕು. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಒದಗಿಸಬೇಕು. ಮನೆ ನೀವೇಶನಕ್ಕೆ ಅರ್ಜಿ ಸಲ್ಲಿಸಿ ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿರುವ ಕುಟುಂಬಗಳಿಗೆ ಶೀಘ್ರ ಮನೆ ನಿವೇಶನ ಒದಗಿಸಬೇಕು. ಟೆಂಟ್‌ಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ದಾರಿ, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು.ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಕೋಶದ ಸೌಲಭ್ಯಗಳನ್ನು ಅಳವಡಿಸಬೇಕು. ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಯುವಕರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದೆ.
ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಬಜಾಲ್, ಅಧ್ಯಕ್ಷ ರವಿ ಟಿ.ಎನ್, ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ನಿಯೋಗದಲ್ಲಿದ್ದರು.