ಕೋಮುವಾದಿ ಶಕ್ತಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಯತ್ನ: ಬಸವರಾಜು

Update: 2024-11-17 10:22 GMT

ಮಂಗಳೂರು, ನ.16: ದೇಶದಲ್ಲಿ ಕೋಮುವಾದಿ ಶಕ್ತಿಗಳು, ಬಂಡವಾಳಶಾಹಿ ಶಕ್ತಿಗಳ ಜೊತೆ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನದಲ್ಲಿ ತೊಡಗಿವೆ ಎಂದು ಸಿಪಿಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಹೇಳಿದ್ದಾರೆ.

'ಉದ್ಯೋಗ, ವಸತಿ, ಸಾಮರಸ್ಯಕ್ಕಾಗಿ' ಎಂಬ ಧ್ಯೇಯದೊಂದಿಗೆ ನ.17ರಿಂದ 19ರವರೆಗೆ (ಕಾಂ. ಸೀತಾರಾಮ ಯೆಚೂರಿ ವೇದಿಕೆ, ಕಾಂ. ಬಿ.ಮಾಧವ ಸಭಾಂಗಣ, ಕಾಂ.ಗಂಗಯ್ಯ ಅಮೀನ್ ನಗರ) ನಗರದ ಡಾನ್ ಬಾಸ್ಕೊ ಸಭಾಂಗಣ ಬಲ್ಮಠದಲ್ಲಿ ನಡೆಯಲಿರುವ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ 24ನೇ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಶಕ್ತಿ ಗಳು ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಸರಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಾ ವಿಪಕ್ಷಗಳನ್ನು ಬೆದರಿಸಲು ಅಧಿಕಾರದಲ್ಲಿರುವ ಬಿಜೆಪಿ ಹೊರಟಿದೆ. ದೇಶದಲ್ಲಿ ಎನ್ ಡಿಎ ಗೆ ಹಿನ್ನಡೆಯಾಗುತ್ತಿದ್ದಂತೆ ಬಿಜೆಪಿ ಜೊತೆ ಇರುವ ಮತಾಂಧ ಶಕ್ತಿಗಳು ಜೊತೆ ಸೇರಿ ದಲಿತರ, ಅಲ್ಪ ಸಂಖ್ಯಾತರ ಮೇಲೆ ದಾಳಿ ನಡೆಸಲು ಹೊರಟಿದೆ. ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿ ಬೆಳೆಯುತ್ತಿರುವ ಕಾರಣ ಬಿಜೆಪಿ ಶಕ್ತಿಯನ್ನು ಸೋಲಿಸಲು ಸಂಘಟಿತರಾಗಬೇಕಾಗಿದೆ ಎಂದು ಬಸವರಾಜು ಕರೆ ನೀಡಿದರು.

ದೇಶದಲ್ಲಿ ಒಂದು ಕಡೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾ ಇದ್ದಾರೆ. ಅಪೌಷ್ಟಿಕತೆಯಿಂದ ಪ್ರತೀ ನಿಮಿಷಕ್ಕೆ 10ರಿಂದ 12 ಮಂದಿ ಸಾವಿಗೀಡಾಗುತ್ತಿದ್ದಾರೆ. ಇದರ ಮೂಲ ಸಾಮ್ರಾಜ್ಯವಾದಿ ಶಕ್ತಿಗಳ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿ ಆಗಿದೆ. ಈ ರೀತಿಯ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ಜಗತ್ತಿನ ದೊಡ್ಡ ಬಂಡವಾಳಗಾರರು ಈ ಬಿಕ್ಕಟ್ಟನ್ನು ಇನ್ನಷ್ಟು ವಿಸ್ತರಣೆ ಮಾಡುತ್ತಿದ್ದಾರೆ. ಇದರ ವಿರುದ್ಧ ತೀವ್ರವಾದ ಪ್ರತಿರೋಧ ದೇಶದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಇನ್ನೊಂದೆಡೆ ಸಾಮ್ರಾಜ್ಯವಾದಿ ಶಕ್ತಿ ಗಳು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿವೆ. ಅದಕ್ಕಾಗಿ ನ್ಯಾಟೋ ಕೂಟದ ವಿಸ್ತರಣೆಯಲ್ಲಿ ತೊಡಗಿದೆ. ಈ ಕಾರಣದಿಂದ ಉಕ್ರೇನ್ ಮೇಲೆ ಯುದ್ಧ ನಡೆಯುತ್ತಿದೆ. ಈಗ ನಡೆಯುತ್ತಿರುವ ಯುದ್ಧ ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧ ಅಲ್ಲ, ಬದಲಾಗಿ ನ್ಯಾಟೋ ಕೂಟ ಮತ್ತು ರಶ್ಯ ನಡುವೆ ನಿಜವಾದ ಯುದ್ಧ ನಡೆಯುತ್ತಿದೆ. ಮಾರುಕಟ್ಟೆಯ ವಿಸ್ತರಣೆಗಾಗಿ ಇಸ್ರೇಲ್ ನಿಂದ ದಾಳಿ ನಡೆಯುತ್ತಿದೆ. ಫೆಲೇಸ್ತೀನ್ ವಿರುದ್ಧ ದಾಳಿಗೆ ಅಮೆರಿಕವು ಇಸ್ರೇಲ್ ಗೆ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿಸಿದರು.

ಸಾಮ್ರಾಜ್ಯವಾದಿ ಶಕ್ತಿ ಗಳು ನವ ಉದಾರೀಕರಣ ನೀತಿಯ ಮೂಲಕ ಕೃಷಿ ರಂಗವನ್ನು ಕಬಳಿಸಲು, ಸಾರ್ವಜನಿಕ ರಂಗದ ಉದ್ಯೋಗವನ್ನು ಕಬಳಿಸುವ ಪ್ರಯತ್ನದಲ್ಲಿ ತೊಡಗಿವೆ. ಇದರಿಂದ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಹೆಚ್ಚಿದೆ. ದೇಶದಲ್ಲಿ ಗುತ್ತಿಗೆ ಕಾರ್ಮಿಕರು, ಖಾಯಂ ಉದ್ಯೋಗವನ್ನು ಕಡಿತಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಸಂಕಷ್ಟಕ್ಕೀಡು ಮಾಡುವ ಸೂಚನೆ ಈ ದೇಶದ ಪ್ರಧಾನಿಯವರ ಹೇಳಿಕೆಯನ್ನು ಗಮನಿಸಿದಾಗ ತಿಳಿಯುತ್ತದೆ. ಇದಕ್ಕಾಗಿ ದೇಶದಲ್ಲಿ ಪ್ರತಿರೋಧ ಪ್ರಬಲಗೊಳ್ಳುತ್ತಿದೆ ಎಂದು ಬಸವರಾಜು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಸಿಗೆ ಸಿಪಿಎಂ ಬೆಂಬಲ ನೀಡಿದೆ. ಆದರೆ ಕಾಂಗ್ರೆಸ್ ಅದನ್ನು ಮರೆತಂತಿದೆ. ರಾಜ್ಯದಲ್ಲೂ ಬಂಡವಾಳಶಾಹಿ ಶಕ್ತಿಗಳು ಪ್ರಾಬಲ್ಯ ಸಾಧಿಸುತ್ತಿವೆ. ರಾಜ್ಯ ದಲ್ಲಿ ನಗರ ಪ್ರದೇಶದ ಬಂಡವಾಳ ಶಾಹಿ ಶಕ್ತಿ ಗಳು ಗ್ಯಾರಂಟಿಗೆ ವಿರುದ್ಧ ವಾಗಿವೆ. ಜನರಿಗೆ ಅವರ ಹಣ ಹೋಗುವುದನ್ನು ಸಹಿಸುವುದಿಲ್ಲ ಎಂದವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಡಾ.ಪ್ರಕಾಶ್ ಮಾತನಾಡಿ, ದೇಶದಲ್ಲಿ ಜಮೀನ್ದಾರರ ಹಿತಾಸಕ್ತಿಯನ್ನು ರಕ್ಷಿಸುವ ಸರಕಾರ ನಮ್ಮನ್ನು ಆಳುತ್ತದೆಯೇ ಹೊರತು ಜನರ ಪ್ರಭುತ್ವದ ಆಳ್ವಿಕೆ ನಡೆಯುತ್ತಿಲ್ಲ. 2023ರ ಒಂದು ಸಮೀಕ್ಷೆಯ ಪ್ರಕಾರ ದೇಶದ ಒಂದು ಶೇಕಡ ಜನರ ಬಳಿ ಶೇ.40 ಆಸ್ತಿಇದೆ. ಶೇ.10 ಜನರಲ್ಲಿ 77 ಶೇ. ಸಂಪತ್ತು ಶೇಖರಣೆಯಾಗಿದೆ. ಶೇ 50 ಜನರ ಬಳಿ ಕೇವಲ ಶೇ.3 ಭಾಗದಷ್ಟು ಸಂಪತ್ತು ಇದೆ ಎನ್ನುವ ವರದಿ ಇದೆ. ಆದರೆ ದೇಶದಲ್ಲಿ ಕೇವಲ 3 ಶೇ. ಸಂಪತ್ತು ಹೊಂದಿರುವವರು ಒಟ್ಟು ತೆರಿಗೆಯ ಶೇ.65 ಭಾಗ ಕಟ್ಟುತ್ತಿದ್ದಾರೆ. ಶೇ.77 ಆಸ್ತಿ ಹೊಂದಿರುವವರು ಕಟ್ಟುತ್ತಿರುವ ತೆರಿಗೆಯ ಪಾಲು ಒಟ್ಟು ತೆರಿಗೆಯ ಶೇ.4 ಭಾಗ ಮಾತ್ರ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಹೀಗಿರುವಾಗ ದೇಶ ನಡೆಸುತ್ತಿರುವವರು ಯಾರು ಎನ್ನುವ ಬಗ್ಗೆ ಜನ ಅರಿತುಕೊಳ್ಳಬೇಕಾಗಿದೆ ಎಂದು ಸವಿವರವಾಗಿ ತಿಳಿಸಿದರು.

ಕರ್ನಾಟಕ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೇಂದ್ರ ಸರಕಾರ ಕೊಡದೆ ಇದ್ದಾಗ ಇಲ್ಲಿನ ಬಿಜೆಪಿ ಮೂಲಕ ಆಯ್ಕೆಯಾದ ಸಂಸದರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಬಿಜೆಪಿ ಹಿಂದುಗಳ ಹೆಸರಿನಲ್ಲಿ ಅಧಿಕಾರ ಪಡೆದು ಕೊಂಡು ಹಿಂದುಗಳು ಮುಸ್ಲಿಮರು ಎನ್ನದೆ ಎಲ್ಲರಿಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾರ್ಕ್ಸ್ ವಾದ ಸಾಮರಸ್ಯದ ಸಮ ಸಮಾಜ ಕಟ್ಟುವ ಬಲಿಷ್ಠ ಸಿದ್ದಾಂತವನ್ನು ಹೊಂದಿರುವುದೇ ನಮ್ಮ ಶಕ್ತಿ .ಅದಕ್ಕಾಗಿ ಸಂಘ ಪರಿವಾರ ಕಮ್ಯೂನಿಸ್ಟ್ ಪಕ್ಷವನ್ನು ಪ್ರಬಲ ವಿರೋಧ ಪಕ್ಷವಾಗಿ ಪರಿಗಣಿಸಿದೆ. ಶ್ರೀಲಂಕಾದಲ್ಲಿ ಜನರು ಸಂಕಷ್ಟಕ್ಕೆ ತುತ್ತಾದಾಗ ನಾಯಕತ್ವ ವಹಿಸಿದ್ದ ಕಮ್ಯೂನಿಸ್ಟ್ ಪಕ್ಷ ಅಲ್ಲಿ ಮಹತ್ವದ ರಾಜಕೀಯ ಬದಲಾವಣೆಗೆ ಕಾರಣವಾಗಿದೆ. ಅದೇ ರೀತಿ ದೇಶದಲ್ಲೂ ಪರ್ಯಾಯ ಶಕ್ತಿ ಯಾಗಿ ಸಿಪಿಎಂ ತನ್ನ ಹೋರಾಟವನ್ನು ದೃತಿಗೆಡದೆ ಮುನ್ನಡೆ ಸಬೇಕು ಎಂದವರು ಕರೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೋಮುವಾದದ ವಿರುದ್ಧ ಜಿಲ್ಲೆಯಲ್ಲಿ ಪ್ರಬಲ ಹೋರಾಟದ ಅಗತ್ಯವಿದೆ ಎಂದರು.

ರಾಜ್ಯ ಸಮಿತಿಯ ಸದಸ್ಯ ಸುನೀಲ್ ಕುಮಾರ್ ಬಜಾಲ್, ಜಿಲ್ಲೆಯಲ್ಲಿ ವಸತಿ ರಹಿತರ,ನಿವೇಶನ ರಹಿತರ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಯುತ್ತಿಲ್ಲ, ಕೋಮುವಾದದ ಸಮಸ್ಯೆ ತಡೆಗೆ ಸರಕಾರ ಬದಲಾದರೂ ಪರಿಣಾ ಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಈ ನಡುವೆ ಸುರತ್ಕಲ್ ಬಳಿಯ ಟೋಲ್ ಗೇಟ್ ಸಮಸ್ಯೆ ತೆರವಿಗೆ ನಡೆದ ಹೋರಾಟ ಜಿಲ್ಲೆಯ ಅತ್ಯಂತ ಯಶಸ್ವಿ ಹೋರಾಟವಾಗಿದೆ ಎಂದರು.

*ಫೆಲೆಸ್ತೀನ್ ನಲ್ಲಿ ಕದನ ವಿರಾಮ, ಗಾಝಾ ಮರು ನಿರ್ಮಾಣ ಹಾಗೂ ಮಾನವೀಯ ನೆರವಿಗೆ ಒತ್ತಾಯಿಸುವ ನಿರ್ಣಯ:

ಇಸ್ರೇಲ್ ಸರಕಾರಕ್ಕೆ ಭಾರತದ ಮೋದಿ ನೇತೃತ್ವದ ಕೇಂದ್ರ ಸರಕಾರ ಬೆಂಬಲ ನೀಡುತ್ತಿದೆ. ಫೆಲೆಸ್ತೀನ್ ಬೆಂಬಲಿಸಿದ ಈ ಹಿಂದಿನ ಚಾರಿತ್ರಿಕ ನಿರ್ಣಯವನ್ನು ಮೋದಿ ಸರಕಾರ ಬದಲಾಯಿಸಲು ಹೊರಟಿದೆ. ಫೆಲೆಸ್ತೀನ್ ಸ್ವತಂತ್ರ ದೇಶವಾಗಬೇಕು. ಇಸ್ರೇಲ್ ಅತಿಕ್ರಮಣ ನಿಲ್ಲಿಸಬೇಕು. ಶಾಂತಿ ನೆಲೆಗೊಳ್ಳಬೇಕೆಂದು ಸಿಪಿಎಂನ 24ನೇ ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ನಿರ್ಣಯವನ್ನು ಮಂಡಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕಾ.ಕೃಷ್ಣಪ್ಪ ಸಾಲ್ಯಾನ್ ಧ್ವಜಾರೋಹಣ ನೆರವೇರಿಸಿದರು.

ರಾಜ್ಯ ಸಮಿತಿಯ ಸದಸ್ಯ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಕೊಂಚಾಡಿ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು. ಕೃಷ್ಣಪ್ಪ ಕೊಂಚಾಡಿ ವಂದಿಸಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಸಿಪಿಎಂ ಹೋರಾಟಗಾರ ಸಂಜೀವ ಬಳ್ಕೂರ್ ಅವರನ್ನು ಸನ್ಮಾನಿಸಲಾಯಿತು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News