ಪುತ್ತೂರು: ಕೆಲಸದ ವೇಳೆ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಮನೆ ಎದುರಿನ ರಸ್ತೆಯಲ್ಲಿಟ್ಟು ಹೋದರು
ಪುತ್ತೂರು: ಕೆಲಸದ ವೇಳೆ ಮೃತಪಟ್ಟ ಕಾರ್ಮಿಕರೊಬ್ಬರನ್ನು ಪಿಕಪ್ ವಾಹನದಲ್ಲಿ ತಂದು ಮೃತರ ಮನೆ ಎದುರಿನ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಪುತ್ತೂರಿನಲ್ಲಿ ನಡೆದಿರುವುದು ವರದಿಯಾಗಿದೆ. ಘಟನೆ ಖಂಡಿಸಿ ದಲಿತ ಸಂಘಟನೆಗಳು ಇಂದು ಪುತ್ತೂರು ನಗರ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಘಟನೆ ವಿವರ: ಘಟನೆಯು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ಎಂಬಲ್ಲಿ ಶನಿವಾರ ನಡೆದಿದೆ. ಕೂಲಿ ಕಾರ್ಮಿಕರಾದ ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ(69) ಮೃತಪಟ್ಟವರು.
ಶಿವಪ್ಪರನ್ನು ಶನಿವಾರ ಬೆಳಗ್ಗೆ ಸಾಲ್ಮರ ತ್ರಾವೋ ಇಂಡಸ್ಟ್ರೀಸ್ ನ ಹೆನ್ರಿ ತ್ರಾವೋ ಎಂಬವರು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದೊಯ್ದಿದ್ದರೆನ್ನಲಾಗಿದೆ. ಕೆಲಸದ ಸ್ಥಳದಲ್ಲಿ ಶಿವಪ್ಪರಿಗೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡಿದ್ದು, ಮಧ್ಯಾಹ್ನದ ವೇಳೆ ಪಿಕಪ್ ನಲ್ಲೇ ಶಿವಪ್ಪರನ್ನು ಕರೆತಂದು ಅವರ ಮನೆಯ ಮುಂಭಾಗದಲ್ಲಿನ ರಸ್ತೆಯಲ್ಲಿ ಮಲಗಿಸಿ ತೆರಳಿದ್ದಾರೆ. ತಕ್ಷಣ ನಾನು ಹಾಗೂ ತಾಯಿ ರಸ್ತೆ ಬದಿ ಹೋಗಿ ನೋಡಿದಾಗ ತಂದೆ ಮೃತಪಟ್ಟಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮನೆಯೊಳಗಡೆ ತಂದೆವು ಎಂದು ಶಿವಪ್ಪರ ಪುತ್ರಿ ಉಷಾ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉಷಾ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ತಂದಿದ್ದಾರೆ ಎನ್ನಲಾದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃತ್ಯ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಶಿವಪ್ಪರ ಮೃತದೇಹವನ್ನು ರಸ್ತೆಯಲ್ಲಿಟ್ಟು ಹೋದ ಅಮಾನವೀಯ ಘಟನೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ರವಿವಾರ ಪುತ್ತೂರು ನಗರ ಠಾಣೆಯ ಎದುರು ಪ್ರತಿಭಟನೆ ನಡೆಸಿದವು.
ಬಳಿಕ ಪೊಲೀಸರು ಸಾಲ್ಮರದ ತಾವ್ರೋಮಿಲ್ಗೆ ತೆರಳಿ ಗೇಟ್ ತೆರೆದು ಮೃತದೇಹ ಸಾಗಾಟ ಮಾಡಿದ್ದರು ಎನ್ನಲಾಗಿದ್ದ ಪಿಕಪ್ ವಾಹನವನ್ನು ಪೊಲೀಸರು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದಲಿತ ಸಂಘಟನೆಗಳ ಮುಖಂಡರು, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಸಮರ್ಪಕ ತನಿಖೆಗೆ ಶಾಸಕರ ಸೂಚನೆ
ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡಿರುವುದನ್ನು ಪ್ರಶ್ನಿಸಿದ ಶಾಸಕ ಅಶೋಕ್ ಕುಮಾರ್ ರೈ ಈ ತರಹ ಎಸೆದು ಹೋಗುವುದು ಸರಿಯಾದ ಕ್ರಮವಲ್ಲ. ಘಟನೆ ಬಗ್ಗೆ ಸಮರ್ಪಕ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.