ಉಳ್ಳಾಲ| ಮೂವರು ಯುವತಿಯರು ಮೃತ್ಯು ಪ್ರಕರಣ: ಬೀಚ್ ರೆಸಾಟ್೯ಗೆ ಬೀಗಮುದ್ರೆ
ಮಂಗಳೂರು: ಈಜುಕೊಳದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾಟ್೯ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ಈ ರೆಸಾಟ್೯ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ರೆಸಾರ್ಟ್ ಗೆ ಆಗಮಿಸಿದ್ದ ಈ ಮೂವರು ಯುವತಿಯರು ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿರುವ ಈಜುಕೊಳದಲ್ಲಿ ನೀರಾಟವಾಡುತ್ತಿದ್ದರು. ಈ ವೇಳೆ ಮೊಬೈಲ್ ಫೋನ್ ವೊಂದನ್ನು ಈಜುಕೊಳದ ನೀರಿಗೆ ಗುರಿಯಾಗಿಸಿ ವೀಡಿಯೊ ರೆಕಾರ್ಡ್ ಚಾಲನೆಯಲ್ಲಿಟ್ಟು ಈಜುಕೊಳಕ್ಕೆ ಇಳಿದಿದ್ದಾರೆ. ಸರಿಯಾಗಿ ಈಜು ಬಾರದ ಯುವತಿಯರು ಆಳವಿರುವ ಕಡೆ ತೆರಳಿದ್ದರಿಂದ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಉಳ್ಳಾಲ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.