ಹಣಕಾಸಿನ ವಿಚಾರಕ್ಕೆ ಹಲ್ಲೆ: ದೂರು - ಪ್ರತಿದೂರು ದಾಖಲು

Update: 2024-11-17 13:38 GMT

ಪುತ್ತೂರು: ಹಣಕಾಸಿನ ವಿಚಾರದಲ್ಲಿ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಪರಸ್ಪರ ಹಲ್ಲೆ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ಕಬಕ ನಿವಾಸಿ ಪ್ರಕಾಶ್ ಎಸ್(38) ಮತ್ತು ಪರ್ಲಡ್ಕ ನಿವಾಸಿ ಅಬ್ದುಲ್ ಕರೀಂ ಆಶಿಕ್(32 )ಎಂಬವರು ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹಲ್ಲೆಗೆ ಸಂಬಂಧಿಸಿದಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪರ್ಲಡ್ಕ ನಿವಾಸಿ ಅಬ್ದುಲ್ ಕರೀಂ ಆಶಿಕ್  ಅವರು ನೀಡಿದ ದೂರಿನಲ್ಲಿ "ನನಗೆ ಹಾಗೂ ಆರೋಪಿ ಸ್ನೇಹಿತ ತೌಸಿಫ್ ಎಂಬವರಿಗೆ ಹಣಕಾಸಿನ ವಿವಾದವಿದ್ದು ನಾನು ಸ್ನೇಹಿತ ತೌಸಿಫ್ ಸನತ್‌ರೊಂದಿಗೆ, ತೌಸಿಫ್‌ರವರ ಕಾರಿನಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದಾಗ ಕೆಮ್ಮಾಯಿ ಎಂಬಲ್ಲಿ ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಆರೋಪಿ ಪ್ರಕಾಶ್ ಎಂಬಾತ ತನ್ನ ಕಾರನ್ನು ಢಿಕ್ಕಿ ಹೊಡೆಸಿ ಕಾರಿಗೆ ಹಾನಿ ಮಾಡಿದ್ದಲ್ಲದೇ ತಾನು ಕಾರಿನಿಂದ ಇಳಿದಾಗ ಆರೋಪಿಗಳಾದ ಪ್ರಕಾಶ್ ಹಾಗೂ ಇಬ್ಬು ಯಾನೆ ಇಬ್ರಾಹಿಂ ರವರು ನನಗೆ ಹಲ್ಲೆ ನಡೆಸಿರುತ್ತಾರೆ” ಎಂದು ಆರೋಪಿಸಿದ್ದಾರೆ. ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಕಬಕ ನಿವಾಸಿ ಪ್ರಕಾಶ್ ಅವರು ದೂರು ನೀಡಿ,” ತಾನು ತನ್ನ ಕಾರಿನಲ್ಲಿ ಪುತ್ತೂರಿಗೆ ಬರುತ್ತಿರುವಾಗ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಆರೋಪಿಗಳಾದ ಸನತ್, ತೌಶಿಫ್ ಹಾಗೂ ಆಶಿಕ್ ಎಂಬವರು ಕಾರಿನಲ್ಲಿ ಹಿಂಬದಿಯಿಂದ ಬಂದು ಹಣಕಾಸಿನ ವಿಚಾರದ ಹಳೆಯ ದ್ವೇಷದಿಂದ ನನ್ನನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟು ಮಾಡಿರುತ್ತಾರೆ" ಎಂದು ಆರೋಪಿಸಿದ್ದಾರೆ. ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News