ಬಡವರಿಗೆ ತೊಂದರೆಯಾದಂತೆ ನೋಡಿಕೊಳ್ಳೋದು ಅಧಿಕಾರಿಗಳ ಜವಾಬ್ದಾರಿ: ಯು.ಟಿ.ಖಾದರ್

Update: 2024-11-17 12:14 GMT

ಕೊಣಾಜೆ : ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಡಿತರ ರದ್ದುಪಡಿಸಲು ಸರಕಾರ ಸೂಚನೆ ಕಳಿಸಿದ ಕೂಡಲೇ ಇಲ್ಲಿನ ಅಧಿಕಾರಿಗಳು ಪರಿಶೀಲನೆ ಮಾಡದೆ ಪಾಲನೆ ಮಾಡುವುದಾದರೆ ನಿಮಗೆ ಸರಕಾರ ವೇತನ ಕೊಡುವುದೇಕೆ? ಈ ರೀತಿ ಏಕಾಏಕಿ ಪಡಿತರ ರದ್ದುಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಎಷ್ಟು ತರಾತುರಿಯಲ್ಲಿ ಪಡಿತರ ರದ್ದುಪಡಿಸಿ ದ್ದೀರೋ ಅಷ್ಟೇ ತರಾತುರಿಯಲ್ಲಿ ತನಿಖೆ ಮಾಡಿ ಕೇವಲ 15ದಿನಗಳಲ್ಲಿ ಅರ್ಹರನ್ನು ಗುರುತಿಸಿ ಸಮಸ್ಯೆ ಸರಿಪಡಿಸಿ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರು, ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದರು.

ಉಳ್ಳಾಲ ತಾಲೂಕಿನ ‌ನರಿಂಗಾನ ಗ್ರಾಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಾರ ಪ್ರಸ್ತಾಪಿಸಿದ ಖಾದರ್ ಬೆಂಗಳೂರಿನಿಂದ ಆದೇಶ ಬಂದಾಗ ಪಡಿತರ ಚೀಟಿ ರದ್ದುಪಡಿಸುವ ಮೊದಲು ತನಿಖೆ ಮಾಡಿ ವರದಿ ಕಳಿಸಿ. ಉಳ್ಳಾಲ‌ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡವರ ಪಡಿತರ ರದ್ದುಪಡಿಸಬೇಡಿ ಎಂದು ಎಚ್ಚರಿಸಿದರು.

ತಮ್ಮ ಕ್ಷೇತ್ರದಲ್ಲಿ ಪ್ರತೀ ಗ್ರಾಮಕ್ಕೂ ‌75ಲಕ್ಷದಿಂದ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಸರಿಯಾಗಿ ಕೆಲಸ ಮಾಡಿದ ಪಂಚಾಯಿತಿಗೆ ಹೆಚ್ಚಿನ ಅನುದಾನ ನೀಡುತ್ತೇನೆ. ಕುಡಿಯುವ ನೀರು, ರಸ್ತೆ, ಪಡಿತರ, ವಿದ್ಯುತ್, ಸರ್ವೇ ಇಲಾಖೆಯ ಸಮಸ್ಯೆ ಪ್ರಮುಖವಾಗಿದೆ. ತಾಲೂಕು ಕಚೇರಿಗೆ ಹೋಗಿ ಕೆಲಸ ಮಾಡಿಸಲು ಸಾಧ್ಯ ಇಲ್ಲದವವರಿಗಾಗಿ ಕಾಲಬುಡಕ್ಕೇ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಲು ಜನಸಂಪರ್ಕ ಸಭೆ ಅಯೋಜಿಸಲಾಗಿದೆ. ಅರ್ಜಿ ಕೊಟ್ಟವರಿಗೆ ವಾರದಲ್ಲೇ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ತಹಸೀಲ್ದಾರ್ ಪುಟ್ಟರಾಜು, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಎಡಿಎಲ್ ಮುಖ್ಯಸ್ಥ ನಿಸಾರ್ ಅಹ್ಮದ್, ತಾಂತ್ರಿಕ ವಿಭಾಗ ಮುಖ್ಯಸ್ಥ ತಾರನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಆರ್.ಈಶ್ವರ್, ಎಸಿಪಿ ಧನ್ಯಾ ನಾಯಕ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಬ್ಬಂದಿ ಸುಧಾ ನಾಡಗೀತೆ ಹಾಡಿದರು. ಸದಸ್ಯ ಲತೀಫ್ ಕಾಪಿಕಾಡ್ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ಚಂದಹಿತ್ಲು ವಂದಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ ಹಾಗೂ ಪಿಡಿಒ ರಜನಿ ಡಿ. ಕಾರ್ಯಕ್ರಮ ನಿರೂಪಿಸಿದರು.

"ಯು.ಟಿ.ಕೆ. ಕುಠೀರ"ದ ಕೀಲಿ ಕೈ ಹಸ್ತಾಂತರ

ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶಾಂತಿಪಳಿಕೆಯ ಪದ್ಮಾವತಿ ಎಂಬ ಎಸ್ ಸಿ ಮಹಿಳೆಗೆ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ "ಯು.ಟಿ.ಕೆ. ಕುಠೀರ"ದ ಕೀಲಿ ಕೈ ಹಸ್ತಾಂತರ, ಕಳ್ಳರಕೋಡಿ ಶಾಲಾ ಕೊಠಡಿ ಉದ್ಘಾಟನೆ, ಸಾಧಕ ಸಂಘ ಸಂಸ್ಥೆ, ಸಾಧಕರಿಗೆ ಸನ್ಮಾನ, ಉಳ್ಳಾಲ ಹಾಗೂ ಬಂಟ್ವಾಳ ತಾಲೂಕಿನ ಎಸ್ ಸಿ, ಎಸ್ ಟಿ ಕುಂದು ಕೊರತೆ ಸಭೆ, ಹಕ್ಕು ಪತ್ರ ವಿತರಣೆಗೆ ಬಾಕಿ ಇದ್ದವರಿಗೆ ಹಕ್ಕು ಪತ್ರ ವಿತರಣೆ, ಪಂಚಾಯಿತಿ ಕಚೇರಿ ಆವರಣದಲ್ಲಿ ಅಳವಡಿಸಿದ ಇಂಟರ್ ಲಾಕ್ ಹಾಗೂ ಮುಖ್ಯ ದ್ವಾರ ಉದ್ಘಾಟಿಸಿ ವಿವಿಧ ಕಾಮಗಾರಿಗಳನ್ನು ಯು.ಟಿ‌. ಖಾದರ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News