ಬಂಟ್ವಾಳ: ತಾಯಿ, ಮಗಳಿಗೆ ಚಾಕು ತೋರಿಸಿ ದರೋಡೆ ಪ್ರಕರಣ; 7 ಮಂದಿ ಆರೋಪಿಗಳ ಬಂಧನ

Update: 2024-01-22 18:11 GMT

ಬಂಟ್ವಾಳ : ತಾಯಿ, ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಟ್ವಾಳ ಪೊಲೀಸರ ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.‌

ಉಡುಪಿ ಜಿಲ್ಲೆಯ ಕಾರ್ಕಳದ ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ದಿನೇಶ್ ನಾಯ್ಕ್, ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್ ಪಿಂಟೋ, ಕಡಬದ ಕೆಲೆಂಬೇರಿ ನಿವಾಸಿಗಳಾದ ಎಂ.ಸೀತಾರಾಮ, ಸುದೀರ್ ಹಾಗೂ ಚಿಕ್ಕಮಗಳೂರು ನಿವಾಸಿ ಹನೀಫ್ ಬಂಧಿತ ಆರೋಪಿಗಳು.

ಬಂಧಿತರಿಂದ ದರೋಡೆಗೈದ 54 ಗ್ರಾಂ ಚಿನ್ನಾಭರಣ ಹಾಗೂ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ವಿವರ

ಜ.11ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಅವರಿಗೆ ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದು, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿ ಕಪಾಟಿನ ಕೀ ಪಡೆದು ಚಿನ್ನ ಹಾಗೂ ‌ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಪತ್ತೆ ಹಚ್ಚಲು ಮೂರು ವಿಶೇಷ ತಂಡವನ್ನು ರಚಿಸಿದ್ದರು.

ಪ್ರಕರಣದ ಗಂಭೀರತೆಯನ್ನು ಮನಗಂಡ ಎಸ್.ಪಿ.ರಿಷ್ಯಂತ್ ಅವರು ಹೆಚ್ಚುವರಿ ಪೋಲೀಸ್ ಅಧೀಕ್ಷರುಗಳಾದ ಧರ್ಮಪ್ಪ ಮತ್ತು ರಾಜೇಂದ್ರ ಸಹಭಾಗಿತ್ವ ದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ ಎಸ್. ವಿಜಯಪ್ರಸಾದ್ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್, ಪುಂಜಾಲಕಟ್ಟೆ ಠಾಣಾಧಿಕಾರಿ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಎಂ.ಆರ್, ಅವರ ಮೂರು ವಿಶೇಷ ತಂಡಗಳನ್ನು ರಚಿಸಿ ಅಪರಾಧ ವಿಭಾಗದ ಸಹಾಯಕ ಉಪ ನಿರೀಕ್ಷಕ ಗಿರೀಶ್, ಹೆಡ್ ಕಾನ್ಸ್ಟೇಬಲ್ ಗಳಾದ ರಾಧಾಕೃಷ್ಣ, ಸುಜು, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್ , ಸಂದೀಪ್, ರಾಹುಲ್, ಇರ್ಶಾದ್, ರಾಜೇಶ್, ಹರಿಶ್ಚಂದ್ರ, ಸಿಬ್ಬಂದಿ ಗಳಾದ ಪುನೀತ್, ರಮ್ಜಾನ್, ಯೋಗೇಶ್ ಡಿ.ಎಲ್, ಕುಮಾರ್ ಎಚ್, ಕೆ.ವಿನಾಯಕ ಬಾರ್ಕಿ, ಜಗದೀಶ್ ಅತ್ತಾಜೆ, ಝಮೀರ್ ಖಲಾರಿ, ಎ.ಎಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್, ಸಂಪತ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನವನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News