ಬಂಟ್ವಾಳ : ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಪ್ರಯಾಣಿಕ; ಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದ ಚಾಲಕ!

Update: 2023-10-15 16:44 GMT

ಬಂಟ್ವಾಳ : ಪ್ರಯಾಣಿಕನೋರ್ವ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದುದಲ್ಲದೆ, ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ಸನ್ನು ನೇರವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಂದ ಘಟನೆ ನಡೆದಿದೆ.

ಸುರೇಶ್ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ - ಪುತ್ತೂರು ನಡುವೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್ ನಿಂದ ಇಳಿಯುವಂತೆ ಒತ್ತಾಯಿಸಿ, ಕೋಳಿ ಮಾಂಸ ಬಸ್ ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು, ಆದರೆ ಸುರೇಶ್ ಬಸ್ ನಿಂದ ಇಳಿಯಲು ಒಪ್ಪಲಿಲ್ಲ. ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ.

ಸುರೇಶ್ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನು ಬಂಟ್ವಾಳ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಇಳಿಸಿದ್ದಾನೆ. ಈ ವೇಳೆ ಠಾಣಾ ಉಪ ನಿರೀಕ್ಷಕ ಎಸ್.ಐ.ರಾಮಕೃಷ್ಣ ಅವರು ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕೂಲಿ ಕಾರ್ಮಿಕರು ಬಸ್ ನಲ್ಲಿ ಮಾಂಸ , ಮೀನು ಕೊಂಡುಹೋಗಲು ಅವಕಾಶವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಸುರೇಶ್ ಮಾಡಿದ್ದು, ಕಾರು, ರಿಕ್ಷಾ ಬಾಡಿಗೆ ಮಾಡಿಕೊಂಡು ಒಂದು ಕೆ.ಜಿ.ಕೋಳಿ ಕೊಂಡು ಹೋಗಬೇಕಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಬಡವರು ಕೋಳಿ ಮಾಂಸ ಕೊಂಡು ಹೋದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು, ನಿರ್ವಾಹಕ ಚಾಲಕರ ಇಂತಹ ನಡೆಯ ಬಗ್ಗೆ ಅಕ್ರೋಶಗಳು ವ್ಯಕ್ತವಾಗಿದೆ.

ಬಸ್ ನಲ್ಲಿ ಕೋಳಿ ಮಾಂಸ, ಮೀನು ತರುವಂತಿಲ್ಲ, ಜೀವ ಇರುವ ವಸ್ತುವನ್ನು ತರಬಹುದು, ಮಾಂಸ ಇತರರಿಗೆ ವಾಸನೆ ಬರುತ್ತದೆ. ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆಎಸ್ಸಾರ್ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News