ಬಂಟ್ವಾಳ : ಎಸ್. ಮಹಾಬಲೇಶ್ವರ ಭಟ್ ಅವರ ನೂರರ ನೆನಪು ಕಾರ್ಯಕ್ರಮ

Update: 2023-11-26 16:59 GMT

ಬಂಟ್ವಾಳ : ನ.26, ಎಸ್. ಮಹಾಬಲೇಶ್ವರ ಭಟ್ ಅವರು 1942 ರ ಕ್ವಿಟ್ ಇಂಡಿಯಾ ಚಳುವಳಿ ಮತ್ತು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಂಧನಕ್ಕೆ ಒಳಗಾಗಿದ್ದ ಒಬ್ಬ ಧೀಮಂತ ಸ್ವಾತಂತ್ರ್ಯ ಸೇನಾನಿ ಎಂದು ಮಂಗಳೂರಿನ ತಜ್ಞ ವೈದ್ಯ ಹಾಗೂ ಚಿಂತಕ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.

ರವಿವಾರ ಬಂಟ್ವಾಳದ ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಜರುಗಿದ ಕಮ್ಯೂನಿಸ್ಟ್ ನಾಯಕ ಎಸ್. ಮಹಾಬಲೇಶ್ವರ ಭಟ್ ರವರ ನೂರರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಎಸ್.ಮಹಾಬಲೇಶ್ವರ ಭಟ್ ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿ ಎಸ್.ವಿ.ಘಾಟೆ, ಸಿಂಪ್ಸನ್ ಸೋನ್ಸ್, ಎ.ಶಾಂತಾರಾಮ ಪೈ, ಬಿ.ವಿ.ಕಕ್ಕಿಲ್ಲಾಯ, ಲಿಂಗಪ್ಪ ಸುವರ್ಣ, ದಾಸಶ್ರೇಷ್ಠರಾದ ಮಾಸ್ಟರ್, ಎ.ಶಿವಶಂಕರ ರಾವ್, ಎಸ್.ಆರ್ ಮುಂತಾದ ಘಟಾನುಘಟಿ ನಾಯಕರ ಸಂಪರ್ಕ ಬೆಳೆಸಿ ಅವರ ಸದಾಶಯದಂತೆ ಸಮ ಸಮಾಜದ ಕನಸು ಕಂಡು ಚಳುವಳಿಯಲ್ಲಿ ಧುಮುಕಿದವರು ಎಂದ ಅವರು ಇಂದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಾಗೂ ಸಾಮರಸ್ಯಕ್ಕೆ ಕಿಂಚಿತ್ತೂ ಕೊಡುಗೆ ನೀಡದ ಶಕ್ತಿಗಳಿಂದ ದೇಶ ಪ್ರೇಮದ ಪಾಠ ಕೇಳುವ ದುರಂತ ಬಂದೊದಗಿದೆ. ಸಾಮರಸ್ಯದಲ್ಲಿ ಬದುಕಲು ಪೂರಕವಾದ ಎಲ್ಲಾ ಕ್ಷೇತ್ರಗಳನ್ನು ಈ ಶಕ್ತಿಗಳು ಅತಿಕ್ರಮಿಸಿಕೊಂಡಿದ್ದಾರೆ. ಖಾಲಿಯಾದ ಜಾಗವನ್ನು ಮರು ಪಡೆಯುವುದೇ ಮಹಾಬಲೇಶ್ವರ ಭಟ್ ರವರಿಗೆ ಕೊಡುವ ನಿಜವಾದ ಗೌರವ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾನು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷನಾಗಿದ್ದ ಸಂದರ್ಭ ಮಹಾಬಲೇಶ್ವರ ಭಟ್ ನಿರ್ದೇಶಕರಾಗಿದ್ದರು. ನಮಗೆ ವಯಸ್ಸಿನ ಅಂತರ ತೀರಾ ವ್ಯತ್ಯಾಸ ಇದ್ದರೂ ಹಿರಿಯ ಕಿರಿಯ ಎಂಬ ಭೇದ ಭಾವ ಇಲ್ಲದೇ ಅಪಾರ ಗೌರವ ನೀಡುತ್ತಿದ್ದರು. ಇದು ಅವರ ಕಮ್ಯೂನಿಸ್ಟ್ ಚಿಂತನೆ. ಮೇಲ್ವರ್ಗದ, ಶ್ರೀಮಂತ ಜಮೀನ್ದಾರಿ, ಕುಲೀನ ಮನೆತನದಲ್ಲಿ ಜನಿಸಿ, ಸಾಮಾಜಿಕ ನ್ಯಾಯವನ್ನು ದುರ್ಬಲ ಅತೀ ಹಿಂದುಳಿದ ವರ್ಗದ ದೀನದಲಿತರ ಪರವಾಗಿ ಕಾಳಜಿ ವಹಿಸಿ ಕೆಲಸ ಮಾಡುವ ಹೃದಯದ ಶ್ರೀಮಂತಿಕೆ ಮಹಾಬಲೇಶ್ವರ ಭಟ್ಟರದ್ದು. ಇಂತಹ ವ್ಯಕ್ತಿಗಳು ಅಪರೂಪ ಎಂದ ಅವರು ಭಾರತ ಕಮ್ಯೂನಿಸ್ಟ್ ಪಕ್ಷದ ಗೇಣಿದಾರರ ಪರವಾದ ಹೋರಾಟ ಅವಿಸ್ಮರಣೀಯ. ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಐತಿಹಾಸಿಕ ಹೋರಾಟ ನಡೆದಿದೆ. ಅದರ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡವರು ಎಸ್.ಮಹಾಬಲೇಶ್ವರ ಭಟ್. ಆದರೆ ಇಂದು ಭೂ ಸುಧಾರಣೆ ಮುಖೇನ ಭೂಮಿ ಪಡೆದವರಿಗೆ ಅದು ಯಾರಿಂದ ಬಂದಿದೆ ಎಂದು ತಿಳಿಯದೇ ಇರುವುದು ವಿಪರ್ಯಾಸ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಅತ್ಯಂತ ಸರಳ ಸಜ್ಜನ ಮಹಾಬಲೇಶ್ವರ ಭಟ್ ರವರಿಗೆ ನನ್ನ ತಂದೆ ಸಂಜೀವ ಗಟ್ಟಿ ಯವರು ನಿಕಟವರ್ತಿಯಾಗಿದ್ದರು. ಕೊಡುಗೈ ದಾನಿಯಾದ ಮಹಾಬಲೇಶ್ವರ ಭಟ್ ರವರ ಸವರ್ಕುಡೇಲು ಮನೆತನದ ಸುಮಾರು 5 ಎಕರೆ ಜಾಗವನ್ನು ಶಾಲೆಗೆ ದಾನವಾಗಿ ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಒಬ್ಬ ವ್ಯಕ್ತಿಯನ್ನು ನಾವು ನೂರ್ಕಾಲ ನೆನಪಿಸಿಕೊಳ್ಳುವುದೇ ಅವರ ವ್ಯಕ್ತಿತ್ವ ಎಂಬುದನ್ನು ಬಿಂಬಿಸುತ್ತದೆ ಎಂದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎನ್.ಪದ್ಮನಾಭ ರವರು ತನಗೆ ಮಹಾಬಲೇಶ್ವರ ಭಟ್ ಮಾಡಿದ ಸಹಾಯ ಹಾಗೂ ತನ್ನ ವ್ಯಕ್ತಿತ್ವ ಬೆಳೆಸಲು ಸಹಕರಿಸಿರುವುದನ್ನು ನೆನಪಿಸಿಕೊಂಡರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಐಟಿಯುಸಿ ನಾಯಕರಾದ ವಿ.ಕುಕ್ಯಾನ್, ಮಹಾಬಲೇಶ್ವರ ಭಟ್ ರವರ ಪುತ್ರ ಡಾ.ಉದಯ ಶಂಕರ್, ಪುತ್ರಿ ಡಾ.ಮಾಧವಿ, ನರಿಂಗಾನ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಮಾತನಾಡಿದರು.

ಸಿಪಿಐ ನಾಯಕ ಅಮ್ಟಾಡಿ ಗ್ರಾಮ ಪಂಚಾಯಿತ್ ಸದಸ್ಯ ಬಿ.ಬಾಬು ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಪ್ರೇಮನಾಥ ಕೆ ವಂದಿಸಿದರು.








 

 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News