ಬಂಟ್ವಾಳ : ಮಹಿಳೆ ನಾಪತ್ತೆ
ಬಂಟ್ವಾಳ : ಕಲ್ಲಡ್ಕ ಸಮೀಪದ ಅಮ್ಟೂರು ಎಂಬಲ್ಲಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಎಂಬಾಕೆ ಕಾಣೆಯಾದ ಮಹಿಳೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ಚಿತ್ರನಟಿ ರಾಧಿಕ ಅವರ ಎಸ್ಟೇಟ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.
ಅ.13 ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದು ಬೆಳಿಗ್ಗೆ 10.30 ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಮನೆ ಕಡೆ ಹೋಗಿ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು. ಬಟ್ಟೆ , ಆಧಾರ್ ಕಾರ್ಡ್, ನಗದು ಸಹಿತ ಹೋಗಿರುವ ವಿಚಾರ ಗಮನಕ್ಕೆ ಬಂದಿದೆ. ಆಕೆ ಹಿಂದೆ ಗಂಡನ ಜೊತೆ ಮುನಿಸಿಕೊಂಡು ಧರ್ಮಸ್ಥಳ, ಮಂಗಳೂರು ಕಡೆ ಹೋಗಿ ತಿರುಗಾಡಿ ಕೊಂಡು ವಾಪಸು ಬರುತ್ತಿದ್ದಳು. ಅದೇ ರೀತಿ ಹೋಗಿರಬಹುದು ಅಂದುಕೊಂಡಿದ್ದ ಗಂಡನಿಗೆ ಅ.14.ರಂದು ಕರೆ ಮಾಡಿ ನನ್ನನ್ನು ಹುಡುಕಬೇಡಿ ನಾನು ದೂರ ಹೋಗುತ್ತೇನೆಂದು ತಿಳಿಸಿದ್ದು ಇದೀಗ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ನಾಪತ್ತೆಯಾಗಿದ್ದಾಳೆ ಎಂದು ಗಂಡ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.