ಬಿ.ಸಿ.ರೋಡ್- ಸುರತ್ಕಲ್ ರಾ.ಹೆ. ಸಮಸ್ಯೆಗೆ ಶಾಶ್ವತ ಪರಿಹಾರ; ಬೈಪಾಸ್ ರಸ್ತೆ ಸೇರಿದಂತೆ ಪ್ರಸ್ತಾವನೆಗೆ ಸಂಸದ ಬ್ರಿಜೇಶ್ ನಿರ್ದೇಶನ
ಮಂಗಳೂರು, ಸೆ.13: ಬಿ.ಸಿ.ರೋಡ್ ಹಾಗೂ ಸುರತ್ಕಲ್‌ನ ನಡುವಿನ ಜನದಟ್ಟಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಪಾಸ್ ರಸ್ತೆ, ಟೋಲ್‌ಗೇಟ್, ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಕಾರ್ಯರ್ಯೋಜನೆಯ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಸಂಸದ ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿಯ ತಮ್ಮ ಪ್ರಥಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತೀ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ಈ ರಾ. ಹೆದ್ದಾರಿಯಲ್ಲಿ ಕಳೆದ 14 ವರ್ಷಗಳಿಂದ ಜನರು ಟೋಲ್‌ಗೇಟ್ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದ್ದು, ಪ್ರಸ್ತಾವನೆಯನ್ನು ಸಿದ್ಧ ಪಡಿಸಿ ನೀಡಿ ಎಂದು ಹೇಳಿದ ಸಂಸದ ಬ್ರಿಜೇಶ್ ಚೌಟ, ರಾ.ಹೆದ್ದಾರಿ ರಸ್ತೆ ಬದಿಗಳಲ್ಲಿ ಮೀನುಮಾರಾಟ, ಬೀದಿಬದಿ ವ್ಯಾಪಾರದಿಂದ ಅಪಘಾತಕ್ಕೆ ಕಾರಣವಾಗುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದರು.
ಮಾರ್ಚ್‌ನೊಳಗೆ ಕಲ್ಲಡ್ಕ ಫ್ಲೈ ಓವರ್ ಪೂರ್ಣ
ಪೆರಿಯಶಾಂತಿ- ಗುಂಡ್ಯ ರಾ.ಹೆದ್ದಾರಿಯ 66 ಕಿ.ಮೀ. ಉದ್ದದ ಚತುಷ್ಪಥ ಕಾಮಗಾರಿಯ 1ನೆ ಹಂತದ ಕಾಮಗಾರಿಯಲ್ಲಿ ಬಂಟ್ವಾಳ ಕ್ರಾಸ್ ಸೆಕ್ಷನ್‌ನ 255.703 ಕಿ.ಮೀ. 270.270 ಕಿ.ಮೀ.ವರೆಗೆ ಎಲಿಫೆಂಟ್ ಅಂಡರ್‌ಪಾಸ್ ಫ್ಲೈ ಓವರ್‌ಗೆ ಸಂಬಂಧಿಸಿ ಕೋರ್ಟ್‌ನಲ್ಲಿ ದಾವೆ ಇದೆ. ಉಳಿದಂತೆ ಪ್ಯಾಕೇಜ್ 1ರಂಲ್ಲಿ ಶೇ. 94ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ಯಾಕೇಜ್ 2ರಲ್ಲಿ 31.10 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಕಲ್ಲಡ್ಕ ಫ್ಲೈ ಓವರ್ 2025ರ ಮಾರ್ಚ್‌ನೊಲಗೆ ಪೂರ್ಣ ಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೆದ್ ಆಜ್ಮಿ ಮಾಹಿತಿ ನೀಡಿದರು.
ಕಲ್ಲಡ್ಕ ಸರ್ವಿಸ್ ರಸ್ತೆಯನ್ನು ವಾಹನ ಸಂಚಾರಕ್ಕೆ ಯಾವಾಗ ಯೋಗ್ಯ ಗೊಳಿಸುವಿರಿ ಎಂದು ಸಂಸದರು ಕೇಳಿದಾಗ ಪ್ರಮುಖ ಭಾಗವನ್ನು ಈಗಾಗಲೇ ಸುಸಜ್ಜಿತಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಒಳಚರಂಡಿ ಮತ್ತು ಸರ್ವಿಸ್ ರಸ್ತೆಯನ್ನು ಡಿಸೆಂಬರ್‌ನೊಳಗೆ ಪೂರ್ಣಗೊಳಿಸುವುದಾಗಿ ಅಬ್ದುಲ್ಲಾ ಆಜ್ಮಿ ತಿಳಿಸಿದರು.
ಏಕಲವ್ಯ ಮಾದರಿ ವಸತಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಿ
ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮೂಲಕ ಕಾರ್ಯನಿರ್ವಹಿಸುವ ಏಕಲವ್ಯ ಮಾದರಿ ವಸತಿ ಶಾಲೆ ಜಿಲ್ಲೆಯಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ದಪಡಿಸುವಂತೆ ನಿರ್ದೇಶಿಸಿದ ಸಂಸದ ಬ್ರಿಜೇಶ್ ಚೌಟ, ಬೆಳ್ತಂಗಡಿ ಅಥವಾ ಕಡಬ ಅಥವಾ ಮುಲ್ಕಿ ಸೇರಿದಂತೆ ಸಾಧ್ಯವಾದಷ್ಟು ಗ್ರಾಮಾಂತರ ಭಾಗಕ್ಕೆ ಒತ್ತು ನೀಡಿ ಈ ಶಾಲೆ ಆರಂಭಿಲು ಆದ್ಯತೆ ನೀಡುವಂತೆ ಅಪರ ಜಿಲ್ಲಾಧಿಕಾರಿಗೆ ಸೂಚಿಸಿದರು.
ರಾಜ್ಯಕ್ಕೆ ಇಲ್ಲಿಯ ತನಕ ಯೋಜನೆಯಲ್ಲಿ ಒಂದು ಶಾಲೆ ಕೂಡ ದೊರೆತ್ತಿಲ್ಲ. ಯೋಜನೆಗೆ ಆವಶ್ಯಕ 15 ಎಕರೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅವರು ನಿರ್ದೇಶಿಸಿದರು.
ರೈಲ್ವೇ ಬಗ್ಗೆ ಮಾಸಿಕ- ತ್ರೈಮಾಸಿಕ ಸಭೆಗೆ ಸೂಚನೆ
ರೈಲ್ವೆ ಇಲಾಖೆ ಸಂಬಂಧಿಸಿದ ವಿಷಯಗಳಿಗೆ ಉತ್ತರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಜರಿರದ ಕಾರಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ರೈಲ್ವೇ ಸಚಿವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಸಭೆ ನಡೆಸಿದ್ದ ವೇಳೆ ಡಿಆರ್‌ಎಂರನ್ನು ಒಳಗೊಂಡಂತೆ ಮೂರು ತಿಂಗಳಿಗೊಮ್ಮೆ ಹಾಗೂ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ತಿಂಗಳಿಗೊಮ್ಮೆ ನಡೆಸಲು ಸೂಚನೆ ನೀಡಿದ್ದಾರೆ. ಅದರಂತೆ ಈವರೆಗೆ ಒಂದು ಸಭೆ ಮಾತ್ರ ನಡೆದಿದೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಪ್ರತಿ ತಿಂಗಳು ಈ ಸಭೆಯನ್ನು ನಡೆಸುವ ಮೂಲಕ ರೈಲ್ವೇ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡುವ ಕಾರ್ಯ ಆಗಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಕೊಟ್ಟಾರ ಚೌಕಿ ಸಮಸ್ಯೆ ಬಗೆಹರಿಸಲು ಮೇಯರ್ ಆಗ್ರಹ
ಮಳೆಗಾಲದಲ್ಲಿ ಕೊಟ್ಟಾರ ಚೌಕಿಯಲ್ಲಿ ನೀರು ನಿಂತು ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಕ್ರಮವನ್ನು ರಾ. ಹೆದ್ದಾರಿ ಇಲಾಖೆ ಮಾಡಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆಗ್ರಹಿಸಿದರು.
ನಂತೂರು ವೆಹಿಕಲ್ ಓವರ್‌ಪಾಸ್ ಸಮಸ್ಯೆ ಬಗೆಹರಿಸಿ
ನಂತೂರಿನಲ್ಲಿ ವೆಹಿಕಲ್ ಓವರ್ ಪಾಸ್‌ಗೆ ಸಂಬಂಧಿಸಿದ ಯೋಜನೆ ಮೂರು ವರ್ಷಗಳ ಹಿಂದೆ ಮಂಜೂರಾಗಿದೆ. ಆದರೂ ಇನ್ನೂ ಸಮಸ್ಯೆಗಳನ್ನು ಹೇಳಿಕೊಂಡು ಬರುವುದೆಂದರೆ ಏನರ್ಥ ? ಸಮಸ್ಯೆ ಬಗೆಹರಿಸಿ ಯೋಜನೆ ಜಾರಿಗೆ ಕ್ರಮ ವಹಿಸಿ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚಿಸಿದರು.
ಆ ಪ್ರದೇಶದಲ್ಲಿ ಪಾಲಿಕೆ ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಪೈಪ್‌ಲೈನ್‌ಗಳನ್ನು ಸ್ಥಳಾಂತರಿಸುವ ಕಾರ್ಯ ಆಗಬೇಕಾಗಿದೆ ಎಂದು ಪಾಲಿಕೆ ಅಧಿಕಾರಿ ನರೇಶ್ ಶೆಣೈ ತಿಳಿಸಿದರು.
ಬಿ.ಸಿ.ರೋಡ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ
ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಬಹ್ಮಶ್ರೀ ನಾರಾಯಣಗುರು ವೃತ್ತವೆಂದು ನಾಮಕರಣ ಮಾಡಲು ಸಭೆ ನಡೆಸಿ ಕ್ರಮ ವಹಿಸು ವಂತೆ ಸಂಸದ ಬ್ರಿಜೇಶ್ ಚೌಟ ಸೂಚಿಸಿದರು.
ಪಂಪ್‌ವೆಲ್- ಎಕ್ಕೂರು ನಡುವಿನ ರಾ.ಹೆ.ಯ ರಸ್ತೆಯನ್ನು ಅಗಲಗೊಳಿಸಿ ಕಾಂಕ್ರಿಟೀಕರಣಗೊಳಿಸಲು ಪ್ರೀಮಿಯಂ ಎಫ್‌ಎಆರ್‌ನಲ್ಲಿ ಹಣ ಇರಿಸಲಾಗಿದ್ದು, ರಾ. ಹೆ. ಇಲಾಖೆಯು ಕಾಮಗಾರಿಗೆ ಅನುಮತಿ ನೀಡಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ಆಗ್ರಹಿಸಿದರು.
ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿ.ಪಂ. ಸಿಇಒ ಡಾ. ಆನಂದ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.
ಜನಮನ್ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತು ನೀಡಿ
ಪ್ರಧಾನ ಮಂತ್ರಿಯವರ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಜನಮನ್ ಕಾರ್ಯಕ್ರಮ ರಾಜ್ಯದ ಐದು ಜಿಲ್ಲೆಗಳಿಗೆ ದೊರಕಿದೆ. ಅದರಲ್ಲಿ ದ.ಕ. ಜಿಲ್ಲೆಯಲ್ಲಿ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಿ ಕ್ರಮ ವಹಿಸಬೇಕು ಎಂದು ಬ್ರಿಜೇಶ್ ಚೌಟ ಹೇಳಿದರು.
9 ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಕುಡಿಯುವ ನೀರು, ವಿದ್ಯುತ್ ಸೋಲಾರ್ ವ್ಯವಸ್ಥೆ ಸೇರಿದಂತೆ ಒಂದೇ ಸೂರಿನಡಿ ಕೊರಗ ಸಮುದಾಯಗಳಿರುವ ಪ್ರದೇಶಗಳಲ್ಲಿ ಸೌಲಭ್ಯಗಳು ದೊರೆಯುವಂತೆ ಕಾಮಗಾರಿ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 181 ಕೊರಗ ಕಾಲನಿಗಳನ್ನು ಗುರುತಿಸಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಮಾಹಿತಿ ನೀಡಿದರು.
ಮಂಗಳೂರು- ಸುಬ್ರಹ್ಮಣ್ಯ ರಸ್ತೆ ವಿದ್ಯುದ್ದೀಕರಣ ನವೆಂಬರ್‌ಗೆಪೂರ್ಣ
ಮಂಗಳೂರು- ಸುಬ್ರಹ್ಮಣ್ಯ ನಡವೆ ರೈಲು ಓಡಾಟವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸಸುಬ್ರಹ್ಮಣ್ಯ ರಸ್ತೆ ವಿದ್ಯುದ್ದೀಕರಣ ಆಗದೆ ಸಮಸ್ಯೆಯಾಗಿದೆ. ಅದು ಯಾವಾಗ ಪೂರ್ಣವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟರವರು ಅಧಿಕಾರಿ ಗಳನ್ನು ಪ್ರಶ್ನಿಸಿದಾಗ, ನವೆಂಬರ್‌ನೊಳಗೆ ಪೂರ್ಣವಾಗಲಿದೆ ಎಂಬ ಉತ್ತರ ದೊರೆಯಿತು.