ಬಿಜೆಪಿ ಸರಕಾರ ಕಾರ್ಪೋರೇಟ್ ಕಂಪೆನಿಗಳ ಕೈಗೊಂಬೆ: ಸುನೀಲ್ ಕುಮಾರ್ ಬಜಾಲ್

Update: 2023-09-04 16:47 GMT

ಮಂಗಳೂರು, ಸೆ.4: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಜನತೆಯ ಮುಂದಿಟ್ಟ ಯಾವೊಂದು ಭರವಸೆ ಗಳನ್ನು ಈಡೇರಿಸಲಿಲ್ಲ. ಬದಲಾಗಿ ಸಾರ್ವಜನಿಕ ಸಂಪತ್ತನ್ನು ಕೊಳ್ಳೆಹೊಡೆಯುವ ಕಾರ್ಪೊರೇಟ್ ಕಂಪೆನಿಗಳ ಕೈಗೊಂಬೆಯಾಗಿದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.

ಕೇಂದ್ರ ಸರಕಾರದ ಪ್ರಜಾಪ್ರಭುತ್ವ, ಜನವಿರೋಧಿ ನೀತಿಗಳ ವಿರುದ್ಧ, ಬೆಲೆಏರಿಕೆ, ನಿರುದ್ಯೋಗ, ವಿದ್ಯುತ್ ಖಾಸಗೀಕ ರಣದ ವಿರುದ್ಧ ಮತ್ತು ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಹಾಗೂ ಸರಕಾರಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಒತ್ತಾ ಯಿಸಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ವಾರಾಚರಣೆಯ ಅಂಗವಾಗಿ ಜರುಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆಯ ಆಡಳಿತಾವಧಿಯಲ್ಲಿ ರೈಲ್ವೆ ಇಲಾಖೆ, ಹೆದ್ದಾರಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪಿಂಚಣಿ ಯೋಜನೆ, ಆಯುಷ್ಮಾನ್ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗ ಪಡಿಸಿದೆ. ಗ್ರಾಪಂನಿಂದ ಹಿಡಿದು ಕೇಂದ್ರ ಸರಕಾರದವರೆಗೂ ಬಿಜೆಪಿಗೆ ಅಧಿಕಾರ ನೀಡಿದರೂ ಈ ಜಿಲ್ಲೆಗೆ ಬಿಜೆಪಿ ಪಕ್ಷದ ಕೊಡುಗೆ ಶೂನ್ಯ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜನ್ನು ಈವರೆಗೂ ಸ್ಥಾಪಿಸಲು ಸಾಧ್ಯವಾಗಿಲ್ಲ. ಚಿಕಿತ್ಸೆ ಹೆಸರಲ್ಲಿ ಖಾಸಗಿ ಆಸ್ಪತ್ರೆಯ ಲೂಟಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ, ಸಿಪಿಎಂ ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಸಿಪಿಎಂ ಪಕ್ಷದ ನಗರ ದಕ್ಷಿಣ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಲೋಕೇಶ್ ಎಂ, ಜಯಂತಿ ಬಿ. ಶೆಟ್ಟಿ, ಪ್ರದೀಪ್ ಉರ್ವಸ್ಟೋರ್, ಭಾರತೀ ಬೋಳಾರ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News