ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ, ಪ್ರತಿಫಲ ಸಿಕ್ಕಿದೆ : ಬಿ.ಕೆ.ಹರಿಪ್ರಸಾದ್

Update: 2024-11-24 09:41 GMT

ಮಂಗಳೂರು : ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆದ ಚುನಾವಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ಹಾಗೂ ಪ್ರತಿ ಫಲ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ

ನಗರದ ಮಲ್ಲಿಕಟ್ಟೆಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು‌ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಪಕ್ಷ ಜಯಿಸಿದೆ. ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಒಂದನ್ನು ಉಳಿಸಿಕೊಂಡು, ವಿಪಕ್ಷದ ಹಿಡಿತದಲ್ಲಿದ್ದ ಎರಡನ್ನು ಗೆದ್ದುಕೊಂಡು ಅಭೂತಪೂರ್ವ ಯಶಸ್ಸು ಗಳಿಸಿದ್ದು, ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.

ಚುನಾವಣಾ ಮೊದಲು ಕರ್ನಾಟಕದಲ್ಲಿ ವಿಪಕ್ಷಗಳು ಹಲವಾರು ಷಡ್ಯಂತ್ರ , ಕುತಂತ್ರಗಳನ್ನು , ಅಪಪ್ರಚಾರ, ಸುಳ್ಳು ಸುದ್ದಿಯನ್ನು ಹರಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪ್ರಿಯತೆಯನ್ನು ಕುಗ್ಗಿಸಲು ಪ್ರಯತ್ನ ಮಾಡಿರುವುದನ್ನು ಜನಸಾಮಾನ್ಯರು ನೋಡಿದ್ದಾರೆ. ಮೊದಲನೆಯದಾಗಿ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ, ವಕ್ಫ್, ಭ್ರಷ್ಟಾಚಾರದ ಬಗ್ಗೆ ಇಲ್ಲ ಸಲ್ಲದ ಆರೋಪ, ಭ್ರಷ್ಟಾಚಾರದ ಆರೋಪ, ಈಡಿ, ಸಿಬಿಐ,ಐಟಿ ಸಂಸ್ಥೆ ಗಳ ದುರುಪಯೋಗ ಮಾಡಿಕೊಂಡು ಕಾಂಗ್ರೆಸನ್ನು ಮಣಿಸಲು ವಿಪಕ್ಷಗಳು ಸತತ ಪ್ರಯತ್ನ ಮಾಡಿದರೂ, ಜನತೆ ಅವರನ್ನು ತಿರಸ್ಕರಿಸಿ ಜನತೆ ಒಳ್ಳೆಯ ತೀರ್ಪನ್ನು ನೀಡಿದ್ದಾರೆ. ಅದಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಕರ್ನಾಟಕದ ಜನತೆಯನ್ನು, ಅದರಲ್ಲೂ ಮೂರು ಕ್ಷೇತ್ರಗಳ ಮತದಾರರನ್ನು ಅಭಿನಂದಿಸುತ್ತೇನೆ ಎಂದರು.

ರಾಷ್ಟ್ರ ರಾಜಕಾರಣದ ವಿಚಾರವನ್ನು ನೋಡಿದರೆ ಜಾರ್ಖಂಡ್ ನಲ್ಲಿ ಜೆಎಂಎಂ ,ಕಾಂಗ್ರೆಸ್, ಆರ್ ಜೆಡಿ ಮತ್ತು ಸಿಪಿಐಎಂಎಲ್ ಒಟ್ಟಾಗಿ ಚುನಾವಣೆ ಎದುರಿಸಿ ಯಶಸ್ಸು ಸಾಧಿಸಿದೆ. ಅಲ್ಲಿರುವ 81 ಕ್ಷೇತ್ರಗಳ ಪೈಕಿ 70ರಲ್ಲಿ ಕಾಂಗ್ರೆಸ್ ಮತ್ತು ಜೆಎಎಂ ಸ್ಪರ್ಧೆ ಮಾಡಿದ್ದೆವು. ಆರ್‌ಜೆಡಿ 6ರಲ್ಲಿ ,ಕಮ್ಯುನಿಸ್ಟ್ 2ರಲ್ಲಿ ಸ್ಪರ್ಧಿಸಿದ್ದವು‌. 56 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಿದೆ.

ಕಳೆದ ಬಾರಿ 30 ಸ್ಥಾನಗಳಲ್ಲಿ 16ಸ್ಥಾನಗಳನ್ನು ನಾವು ಜಯಿಸಿದ್ದೆವು. ಅಲ್ಲಿದ್ದ ಜೆಎಂಎಂ ಮುಖ್ಯ ಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಸರಕಾರ ಐದು ವರ್ಷಗಳನ್ನು ಪೂರ್ಣಗೊಳಿಸಿತ್ತು. ಹೇಮಂತ್ ಸೊರೆನ್ ಗೆ ಐದು ವರ್ಷ ಗಳಲ್ಲಿ ಎರಡು ವರ್ಷ ಕೊರೋನ ಸಮಸ್ಯೆ, ಒಂದು ವರ್ಷ ಅವರಿಗೆ ಜೈಲು, ಉಳಿದ ಎರಡು ವರ್ಷಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲಿಯೂ ಏಳು ಗ್ಯಾರಂಟಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಜಾರ್ಖಂಡ್ ನಲ್ಲಿ ನುಸುಳುಕೋರರ ವಿಚಾರದಲ್ಲಿ ಅಬ್ಬರದ ಅಪ್ರಚಾರ ನಡೆದಿತ್ತು. ಅಲ್ಲಿನ ಜನತೆ ವಿಪಕ್ಷಗಳ ಅಪ್ರಚಾರವನ್ನು ತಿರಸ್ಕರಿಸಿದ್ದಾರೆ. ಅಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆಆರ್ ಲೋಬೊ, ಪಕ್ಷದ ಪ್ರಮುಖರಾದ ಪದ್ಮರಾಜ್ ಆರ್ ಪೂಜಾರಿ, ಶಶಿಧರ ಹೆಗ್ಡೆ, ಸಾರಿಕಾ ಪೂಜಾರಿ, ಟಿಕೆ ಸುಧೀರ್, ಮಿಥುನ್ ರೈ,ಲುಕ್ಮಾನ್ ಬಂಟ್ವಾಳ, ವಿಕಾಸ್ ಶೆಟ್ಟಿ, ಜಿತೇಂದ್ರ ಸುವರ್ಣ, ಚಿತ್ತರಂಜನ್ ಶೆಟ್ಟಿ, ನವೀನ್ ಡಿ ಸೋಜ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News