ಬಿಎನ್‌ಐ ಮಂಗಳೂರು ‘ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ ಚಾಲನೆ

Update: 2023-09-30 12:02 GMT

ಮಂಗಳೂರು, ಸೆ.30: ಬ್ಯುಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಶನಲ್ (ಬಿಎನ್‌ಐ) ಮಂಗಳೂರು ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಅ.2ರವರೆಗೆ ಆಯೋಜನೆಗೊಂಡಿರುವ ‘ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ-2023’ ಪ್ರದರ್ಶನಕ್ಕೆ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಅಗತ್ಯವಿರುವ ಎಲ್ಲ್ಲ ವಸ್ತುಗಳು ಒಂದೇ ಸೂರಿನಡಿ ಒದಗಿಸುವ ಈ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ ಒಂದು ಅತ್ಯುತ್ತಮ ವ್ಯವಸ್ಥೆಯಾಗಿದೆ.ಗೃಹ ನಿರ್ಮಾಣ ಆರಂಭದಿಂದ ಗೃಹಪ್ರವೇಶ ತನಕ ಅಗತ್ಯವಿರುವ ಉತ್ತಮ ಗುಣಮಟ್ಟದ ಸಾಮಗ್ರಿಗಳು ಸುಲಭವಾಗಿ ಲಭ್ಯವಾಗಿವಂತೆ ಬಿಎನ್‌ಐ ಮಾಡಿದೆ. ಸಾರ್ವಜನಿಕರು ಬ್ರ್ಯಾಂಡ್ಸ್ ಎಕ್ಸ್‌ಪೋದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

120ಕ್ಕೂ ಅಧಿಕ ಮಳಿಗೆಗಳು ಇಲ್ಲಿದ್ದು, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಉದ್ಯಮಿಗಳಿದ್ದಾರೆ. ಶಿಕ್ಷಣ, ಪ್ರವಾಸೋದ್ಯಮ ಹಬ್ ಆಗಿ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಇಂತಹ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದವರು ಅಭಿಪ್ರಾಯಪಟ್ಟರು.

ಬಿಎನ್‌ಐ ಮಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್. ಶರ್ಮ ಮಾತನಾಡಿ, ಉದ್ಯಮಿಗಳು ತಮ್ಮ ಉದ್ಯಮವನ್ನು ಇನ್ನಷ್ಟು ವ್ಯಾಪಿಸುವಲ್ಲಿ ಈ ಎಕ್ಸ್‌ಪೋ ಸಹಕಾರಿಯಾಗಿದೆ. ಕಳೆದ ವರ್ಷವೂ ಈ ಎಕ್ಸ್‌ಪೋ ಅಪೂರ್ವ ಯಶಸ್ಸು ಕಂಡಿತ್ತು ಎಂದು ನುಡಿದರು.

ಕಳೆದ 5 ವರ್ಷದಲ್ಲಿ ಸುಮಾರು 400 ಕೋಟಿಯಷ್ಟು ವ್ಯವಹಾರ ನಡೆದಿದ್ದು, ಕಳೆದ ಒಂದೇ ವರ್ಷ 108 ಕೋಟಿ ವ್ಯವಹಾರ ವಾಗಿದೆ. ಈ ವರ್ಷದಲ್ಲಿ 200 ಕೋಟಿ ವ್ಯವಹಾರ ನಡೆಯುವ ಗುರಿ ಹೊಂದಲಾಗಿದೆ. ಪರಸ್ಪರ ಎಲ್ಲರ ಸಹಕಾರದಿಂದಾಗಿ ಈ ಎಕ್ಸ್‌ಪೋ ಯಶಸ್ವಿಯಾಗುತ್ತಿದೆ ಎಂದು ಗಣೇಶ್ ಶರ್ಮ ಹೇಳಿದರು.

ಕಾರ್ಯಕ್ರಮದಲ್ಲಿ ಬಿಎನ್‌ಐ ಎಕ್ಸ್‌ಪೋ ಇದರ ಡೈರೆಕ್ಟರಿಯನ್ನು ಭಾರತ್ ಬೀಡಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಾಯ ಪೈ ಬಿಡುಗಡೆಗೊಳಿಸಿದರು.

ಇದೇ ಸಂದರ್ಭ ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಸುಸಜ್ಜಿತ ಎಕ್ಸ್‌ಪೋ ಸೆಂಟರ್ ಆರಂಭಿಸಲು ಶಾಸಕರು ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಎನ್‌ಐ ಪದಾಧಿಕಾರಿಗಳು ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಮನವಿ ಮಾಡಿದರು.

ಬ್ಯಾಂಕ್ ಆಫ್ ಬರೋಡ ಇದರ ಡಿಜಿಎಂ ಅಶ್ವಿನಿ ಕುಮಾರ್, ಬಿಎನ್‌ಐ ಇದರ ಸಹ ನಿರ್ದೇಶಕಿ ಪ್ರೀತಿ ಶರ್ಮ ಅತಿಥಿಗಳಾಗಿ ಉಪಸ್ಥಿತರಿದ್ದರು.

‘ಬಿಗ್‌ಬ್ರ್ಯಾಂಡ್ಸ್ ಎಕ್ಸ್‌ಪೋ 2023’ ಚೇರ್‌ಮೆನ್ ಮೋಹನ್‌ರಾಜ್ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಶ್ಯಾಮ್ ವಂದಿಸಿದರು. ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

ಅ.2ರವರೆಗೆ ರಾತ್ರಿ 8 ಗಂಟೆಯವರೆಗೆ ಅವಕಾಶ

ಬಿಎನ್‌ಐ ವತಿಯಿಂದ ಅ.2ರವರೆಗೆ ಆಯೋಜನೆಗೊಂಡಿರುವ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋದಲ್ಲಿ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ವರೆಗೆ ಗ್ರಾಹಕರು ಆಗಮಿಸಿ ಎಕ್ಸ್‌ಪೋದ ಪ್ರಯೋಜನ ಪಡೆಯಬಹುದು. ಪ್ರವೇಶ ಉಚಿತವಾಗಿದೆ. ಈ ಬಾರಿಯ ಎಕ್ಸ್‌ಪೋದಲ್ಲಿ ಒಟ್ಟು 120 ಸ್ಟಾಲ್‌ಗಳು ಇವೆ. ಕಟ್ಟಡ ನಿರ್ಮಾಣ ಸಾಮಗ್ರಿ, ಅಟೋಮೊಬೈಲ್, ಜವಳಿ, ಹಾಸ್ಪಿಟಾಲಿಟಿ, ಬ್ಯಾಂಕಿಂಗ್, ಮೆಡಿಕಲ್, ಆಭರಣ, ಮಾನವ ಸಂಪನ್ಮೂಲ, ಜೀವವಿಮೆ, ಲೈಟಿಂಗ್, ಬಟ್ಟೆಬರೆಗಳು, ಐಟಿ ಉತ್ಪನ್ನಗಳು, ಸಾಫ್ಟ್‌ವೇರ್, ಕಚೇರಿ ಮತ್ತು ಮನೆಯ ಪೀಠೋಪಕರಣಗಳು, ಆಹಾರ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿದೆ. ಎಕ್ಸ್‌ಪೋದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕೇರಳ ಮತ್ತು ಕೊಡಗು ಜಿಲ್ಲೆಯಿಂದ ಸುಮಾರು 12 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.






Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News