ದಿನೇಶ್ ಅಮಿನ್ ಮಟ್ಟುಗೆ ಎಂಎಲ್‌ಸಿ ಸ್ಥಾನ ಕೊಡಲು ಆಗ್ರಹಿಸಿ ಅಭಿಯಾನ

Update: 2024-05-28 15:29 GMT

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

ಮಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ ನ ಹನ್ನೊಂದು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಪಡೆಯಲು ಈಗಾಗಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಲಾಬಿ ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈಗಾಗಲೇ ಪ್ರದೇಶ, ಜಾತಿ, ಸಹಿತ ಇನ್ನೂ ಹಲವಾರು ಖೋಟಾಗಳಲ್ಲಿ ಆಕಾಂಕ್ಷಿಗಳು ಬೆಂಗಳೂರು ಹಾಗು ದಿಲ್ಲಿಯಲ್ಲಿ ಲಾಬಿ ಶುರು ಮಾಡಿದ್ದಾರೆ. ಎಂಎಲ್‌ಸಿ ಅಭ್ಯರ್ಥಿಗಳ ಆಯ್ಕೆ ಸುಲಭವಲ್ಲ ಎಂಬುದು ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಸ್ಪಷ್ಟವಾಗಿದೆ. ಹಾಗಾಗಿಯೇ ಅವರು ಹೈಕಮಾಂಡ್ ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತದೆ ಎಂದು ಕೈತೊಳೆದುಕೊಂಡಿದ್ದಾರೆ.

ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಅವರನ್ನು ವಿಧಾನಪರಿಷತ್ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಬಲವಾದ ಆಗ್ರಹ ಕರಾವಳಿ ಜಿಲ್ಲೆಗಳಿಂದ ಕೇಳಿ ಬಂದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಮಟ್ಟು ಊರಿನವರಾದ ದಿನೇಶ್ ಅಮೀನ್ ಮಟ್ಟು ಅವರು ರಾಜ್ಯದ ವಿವಿಧೆಡೆ, ಬೆಂಗಳೂರು ಹಾಗು ದಿಲ್ಲಿಗಳಲ್ಲಿ ಪತ್ರಕರ್ತರಾಗಿ ಸುದೀರ್ಘ ಅನುಭವ ಇರುವವರು. ಜೊತೆಗೆ ಅಂಕಣಕಾರರಾಗಿ, ವಾಗ್ಮಿಯಾಗಿ, ಸಂಘ ಪರಿವಾರ ಹಾಗು ಬಿಜೆಪಿಯ ಕೋಮುವಾದಿ ರಾಜಕೀಯವನ್ನು ಪ್ರಬಲವಾಗಿ ವಿರೋಧಿಸುತ್ತಾ ಪ್ರಗತಿಪರ ಚಳವಳಿಗಳ ಮುಂಚೂಣಿಯಲ್ಲಿದ್ದು ನಾಡಿನ ಗಮನ ಸೆಳೆದವರು. ಸಿದ್ದರಾಮಯ್ಯ ಅವರು ಸಿಎಂ ಆಗಿ ಮೊದಲ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ವಿಶೇಷವಾಗಿ ಕರಾವಳಿ ಕರ್ನಾಟದಲ್ಲಿ ಸಂಘ ಪರಿವಾರದ ಕೋಮುವಾದಿ ಅಜೆಂಡಾವನ್ನು ತಮ್ಮ ಬರಹಗಳು ಹಾಗು ಭಾಷಣಗಳ ಮೂಲಕ ನಿರಂತರ ಬಯಲಿಗೆಳೆಯುತ್ತಾ ಬಂದವರು ದಿನೇಶ್ ಅಮಿನ್ ಮಟ್ಟು. ಜೊತೆಗೆ ವಿವಿಧ ಚಳವಳಿಗಳ ಮೂಲಕವೂ ಯುವಜನರನ್ನು ಸಂಘಟಿಸಿ ಸಂಘ ಪರಿವಾರಕ್ಕೆ ಸೆಡ್ಡು ಹೊಡೆಯಲು ಪ್ರಯತ್ನಿಸಿದ್ದಾರೆ.

ಈಗ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡುವ ಮೂಲಕ ಮೇಲ್ಮನೆಯಲ್ಲಿ ಕೋಮುವಾದಕ್ಕೆ ವಿರೋಧಿ ಪ್ರಬಲ ಧ್ವನಿಯೊಂದಕ್ಕೆ ಅವಕಾಶ ನೀಡಬೇಕು ಎಂದು ಪ್ರಗತಿಪರರ ವಲಯದಿಂದ ಬಲವಾದ ಆಗ್ರಹ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೀಡಿಯಾಗಳಲ್ಲಿ ಇಂತಹ ಆಗ್ರಹಗಳ ಪೋಸ್ಟರ್ ಗಳು ಹರಿದಾಡುತ್ತಿವೆ.

"ದಕ್ಷಿಣ ಕನ್ನಡ ಜಿಲ್ಲೆಗೆ ಎಂಎಲ್‌ಸಿ ಸ್ಥಾನ ಕೊಡುವುದಿದ್ದರೆ ನೈಜ ಜಾತ್ಯತೀತವಾದಿ ದಿನೇಶ್ ಅಮಿನ್ ಮಟ್ಟು ಅವರಿಗೇ ಕೊಡಿ" ಎಂದು ಮಟ್ಟು ಅಭಿಮಾನಿ ಬಳಗದಿಂದ ಆಗ್ರಹಿಸಲಾಗುತ್ತಿದೆ. ಮಟ್ಟು ಅವರಿಗೆ ಪರಿಷತ್ ಸ್ಥಾನ ಕೊಟ್ಟರೆ ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುತ್ತದೆ ಜೊತೆಗೆ ಅವರು ಬಿಲ್ಲವರು ಮಾತ್ರವಲ್ಲ ಎಲ್ಲ ದೀನ ದಲಿತರು, ಅಲ್ಪಸಂಖ್ಯಾತರ ಧ್ವನಿಯಾಗುತ್ತಾರೆ ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ. ಕೋಮುವಾದದ ವಿರುದ್ಧ ಧ್ವನಿ ಎತ್ತಲು ಮಟ್ಟು ಅವರೇ ಸಮರ್ಥ ಎಂದೂ ಆಗ್ರಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಈ ಆಗ್ರಹ ಮಾಡಿರುವ ಪೋಸ್ಟರ್ ಗಳು ಫೇಸ್ ಬುಕ್ , ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿವೆ. ಈ ಆಗ್ರಹಗಳು ಬೆಂಗಳೂರು , ದಿಲ್ಲಿ ಹೈಕಮಾಂಡ್ ಗೆ ಎಷ್ಟು ಪ್ರಮಾಣದಲ್ಲಿ ತಲುಪಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.








 


 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News