ಉಡುಪಿಯಲ್ಲಿ ಇಸ್ರೋದ ಘಟಕವನ್ನು ಸ್ಥಾಪಿಸಲು ಪ್ರಧಾನಿಗೆ ಕ್ಯಾಂಪ್ಕೊ ಆಗ್ರಹ
ಮಂಗಳೂರು: ಇಸ್ರೋದ ಆರಂಭಿಕ ದಿನಗಳಲ್ಲಿ ಅದರ ಅಧಾರಸ್ಥಂಭವಾಗಿ ಭವಿಷ್ಯದ ಸಾಧನೆಗೆ ಹಗಲಿರುಳು ದುಡಿದು ಭದ್ರ ಬುನಾದಿ ಹಾಕಿಕೊಟ್ಟ ಪ್ರೊ.ಯು.ಆರ್.ರಾವ್ ಅವರ ಹೆಸರಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಉಡುಪಿಯಲ್ಲಿ ಇಸ್ರೋದ ಘಟಕವನ್ನು ಸ್ಥಾಪಿಸುವಂತೆ ಕ್ಯಾಂಪ್ಕೊ ಸಂಸ್ಥೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಪ್ರೊ.ಯು.ಆರ್.ರಾವ್ ಕರ್ನಾಟಕದ ಉಡುಪಿ ಜಿಲ್ಲೆಯವರು ಎಂದು ತಿಳಿಸಲು ಕ್ಯಾಂಪ್ಕೊ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದಾರೆ.
ಚಂದ್ರಯಾನ-3ರ ಯಶಸ್ಸಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವಾರು ವಿಜ್ಞಾನಿಗಳು ಗಣನೀಯ ಕೊಡುಗೆ ನೀಡಿದ ಬಗ್ಗೆ ಸಂಸ್ಥೆ ಅಭಿಮಾನ ಪಡುತ್ತಿದೆ. ಅವರೆಲ್ಲರ ಕೊಡುಗೆಗೆ ಗೌರವನೀಡಿ ಪ್ರೋತ್ಸಾಹಿಸುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಇಸ್ರೋ ಪ್ರಯೋಗಾಲಯ ಘಟಕವನ್ನು ಸ್ಥಾಪಿಸುವಂತೆ ಕ್ಯಾಂಪ್ಕೊ ಆಗ್ರಹಿಸಿದೆ. ಈ ಉಪಕ್ರಮವೂ ಈ ವಿಜ್ಞಾನಿ ಗಳ ಅತ್ಯುತ್ತಮ ಸಾಧನೆಗಳನ್ನು ಗೌರವಿಸುವುದು ಮಾತ್ರವಲ್ಲದೆ, ಈ ಪ್ರದೇಶದ ವಿದ್ಯಾರ್ಥಿಗಳು ಮತ್ತು ಇಂಜಿನಿಯರ್ ಗಳಿಗೆ ಸ್ಫೂರ್ತಿಯನ್ನು ನೀಡುವುದರ ಜೊತೆಗೆ ದೇಶಕ್ಕೆ ಇನ್ನಷ್ಟು ಕೊಡುಗೆ ನೀಡಲು ಉತ್ತೇಜನ ನೀಡಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಸರಾಂತ ಶಿಕ್ಷಣ ಕೇಂದ್ರಗಳಿವೆ. ಸ್ಥಳೀಯ ಇಸ್ರೋ ಪ್ರಯೋಗಾಲಯ ಘಟಕವು ಈ ಪ್ರದೇಶ ಗಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ನಾವೀನ್ಯತೆಯನ್ನು ಪೋಷಿಸುತ್ತದೆ.ಇಸ್ರೋ ಅಭಿವೃದ್ಧಿಗೆ ಮೀಸಲಿಟ್ಟ ರೂ.15000 ಕೋಟಿಗಳ ಅನುದಾನದ ಒಂದು ಭಾಗವನ್ನು ಉಡುಪಿ ಜಿಲ್ಲೆಯಲ್ಲಿ ಪ್ರಯೋಗಾಲಯದ ಸ್ಥಾಪನೆಗೆ ಮರುಹಂಚಿಕೆ ಮಾಡುವಂತೆ ಕ್ಯಾಂಪ್ಕೊ ಅಧ್ಯಕ್ಷ ಕೊಡ್ಗಿ ಮನವಿ ಮಾಡಿದ್ದಾರೆ.