2024-25ನೇ ಸಾಲಿನ ಬಜೆಟ್‌ನಲ್ಲಿ ಪ್ರಥಮ ‘ಕರ್ನಾಟಕ ಕ್ರೀಡಾಕೂಟ’ಕ್ಕೆ 5 ಕೋಟಿ ರೂ. : ಮುಲ್ಲೈ ಮುಗಿಲನ್

Update: 2025-01-15 08:44 GMT

ಮಂಗಳೂರು, ಜ. 15: ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ‘ಕರ್ನಾಟಕ ಕ್ರೀಡಾಕೂಟ’ಕ್ಕೆ 2024-25ನೆ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ.ಗಳನ್ನು ಸರಕಾರ ಒದಗಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜ. 17ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದು, ಸಮಾರೋಪ ಸಮಾರಂಭ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಒಟ್ಟು 25 ವಿವಿಧ ಕ್ರೀಡೆಗಳಲ್ಲಿ ಆಯ್ದ, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ 3750 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರ ತಂಡ ಸೇರಿದಂತೆ ಒಟ್ಟು 4500 ಮಂದಿ ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ 12 ಕ್ರೀಡೆಗಳು, ಉಡುಪಿ ಮತ್ತು ಮಣಿಪಾಲದಲ್ಲಿ 11 ಕ್ರೀಡೆಗಳು ಹಾಗೂ ಶೂಟಿಂಗ್ ಹಾಗೂ ಜಿಮ್ನಾಸ್ಟಿಕ್ಸ್ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರತಿಯೊಂದು ಕ್ರೀಡೆಯಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ 621 ಚಿನ್ನ ಹಾಗೂ ಬೆಳ್ಳಿ ಹಾಗೂ 817 ಕಂಚಿನ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. ಕ್ರೀಡಾ ಕೂಟದ ಉದ್ಘಾಟನೆಯ ಅಂಗವಾಗಿ ಜ.17ರಂದು ಸಂಜೆ 4 ಗಂಟೆಗೆ ಸಂತ ಅಲೋಶಿಯ್ ಕಾಲೇಜು ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ಕರಾವಳಿಯ ಕಲೆ, ಕ್ರೀಡೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ 20 ಕಲಾ ತಂಡಗಳ ಮೆರವಣಿಗೆ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದ ಬಳಿಕ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿವರ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಜಿ.ಪಂ. ಸಿಇಒ ಡಾ. ಆನಂದ್, ಯುವ ಜನ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಮನಪಾ ಆಯುಕ್ತ ಆನಂದ್ ಸಿ.ಎಲ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಫೆನ್ಸಿಂಗ್ (ಕತ್ತಿವರಸೆ), ಫುಟ್ಬಾಲ್, ಹ್ಯಾಂಡ್‌ಬಾಲ್, ಖೋಖೋ, ನೆಟ್‌ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್, ವುಶು ಕ್ರೀಡೆಗಳು ನಡೆಯಲ್ದಿು, ಉಡುಪಿಯಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೋಯಿಂಗ್ ನಡೆಯಲಿದೆ. ಮಣಿಪಾಲದಲ್ಲಿ ಲಾನ್ ಟೆನ್ನಿಸ್ ಹಾಗೂ ಟೇಬಲ್ ಟೆನ್ನಿಸ್ ಆಯೋಜಿಸಲಾಗಿದ್ದು, ಜಿಮ್ನಾಸ್ಟಿಕ್ ಹಾಗೂ ಶೂಟಿಂಗ್ ಕ್ರೀಡೆಗಳು ಬೆಂಗಳೂರಿನಲ್ಲಿ ನಡೆಯಲಿವೆ.

ಕಳೆದ ವರ್ಷ ದಸರಾ ಕ್ರೀಡಾಕೂಟದ ಜತೆಗೆ ರಾಜ್ಯದ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಇದೀಗ ಈ ವರ್ಷದಿಂದ ಪ್ರತ್ಯೇಕವಾಗಿ ಕರ್ನಾಟಕ ಕ್ರೀಡಾಕೂಟ ಹೆಸರಿನಲ್ಲಿ ಆಯ್ದ ಉನ್ನತ ಮಟ್ಟದ ಕ್ರೀಡಾಪಟುಗಳೊಂದಿಗೆ ಒಲಿಂಪಿಕ್ ಮಾದರಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು, ಭಾಗವಹಿಸುವ ಕ್ರೀಡಾಪಟುಗಳ ಸಮಗ್ರ ಮಾಹಿತಿಯೊಂದಿಗೆ, ಫಲಿತಾಂಶ ಕೂಡಾ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಕ್ರಮ ವಹಿಸಲಾಗಿದೆ. ಎಲ್ಲಾ ಆಟಗಾರರಿಗೆ ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ವಿತರಿಸುವ ವ್ಯವಸ್ಥೆಯಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.

ಕರ್ನಾಟಕ ಕ್ರೀಡಾಕೂಟ 2025ರ ವಿಶೇಷ ಆಕರ್ಷಣೆಯಾಗಿ ಉದ್ಘಾಟನಾ ಸಮಾರಂಭದ ವೇಳೆ ಮಂಗಳಾ ಕ್ರೀಡಾಂಗಣದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಆಯೋಜಿಸಲಾಗಿದೆ. ಮಂಗಳಾ ಕ್ರೀಡಾಂಗಣದಲ್ಲಿ ಈಗಾಗಲೇ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಸುಮಾರು 94 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಿಸಲಾಗಿದ್ದು, ಕ್ರೀಡಾಂಗಣದ ನಿರ್ವಹಣೆಗಾಗಿ 3 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದ್ದು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕ್ರೀಡಗಳಿಗೆ ಪೂರಕವಾಗಿ ಸಜ್ಜುಗೊಳಿಸಲಾಗಿದೆ.

ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News