ಬಂಟ್ವಾಳ: ಮನೆಯ ಕಂಪೌಂಡ್ ಗೆ ಕಾರು ಢಿಕ್ಕಿ

Update: 2025-01-14 16:02 GMT

ಬಂಟ್ವಾಳ: ಕಾರೊಂದು ಮನೆಯ ಕಂಪೌಂಡ್ ಗೋಡೆ ಬೇಧಿಸಿ ಒಳನುಗ್ಗಿ ಆವರಣಗೋಡೆ ಪುಡಿಗಟ್ಟಿದ್ದಲ್ಲದೆ ಮನೆಯಂಗಳ ದಲ್ಲಿ ನಿಲ್ಲಿಸಿದ್ದ ಕಾರಿಗೂ ಹಾನಿಯಾದ ಘಟನೆ ಸಜಿಪಮೂಡ ಗ್ರಾಮದ ಪಣೋಲಿಬೈಲು ಕ್ರಾಸ್ ಬಳಿ ಸೋಮವಾರ ತಡ ರಾತ್ರಿ ಸಂಭವಿಸಿದೆ.

ಇಲ್ಲಿನ ನಿವಾಸಿ ನಝೀರ್ ಹಾಜಿ ಎಂಬವರ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, ಕಾರು ಚಾಲಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಸೋಮವಾರ ಮಧ್ಯರಾತ್ರಿ ಸುಮಾರು 1.30 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಸ್ಥಳೀಯ ನಿವಾಸಿಗಳು ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಘಟನೆ ನಡೆದು ಕಾರಿನಲ್ಲಿ ದ್ದವರು ಪರಾರಿಯಾಗುತ್ತಿದ್ದ ವೇಳೆ ಓರ್ವನನ್ನು ತಡೆ ಹಿಡಿದು ವಿಚಾರಿಸಿದ್ದು, ಈತ ಕಾರಾಜೆ ಮೂಲದವ ಎನ್ನಲಾಗಿದೆ.

ಕಾರು ಚಾಲಕನ ಮಿತಿ ಮೀರಿದ ವೇಗದಿಂದಲೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಕಾರು ನೇರವಾಗಿ ಮನೆಯ ಆವರಣ ಗೋಡೆಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಆವರಣಗೋಡೆಯ ಒಂದು ಪಾಶ್ರ್ವ ಸಂಪೂರ್ಣ ಕುಸಿದು ಹಾನಿ ಗೊಂಡಿದೆ. ಅಲ್ಲದೆ ಕಂಪೌಂಡ್ ಒಳಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿಗೂ ಹಾನಿಯಾಗಿದೆ. ಘಟನೆಯಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಕಾರಿನಲ್ಲಿ ಅಪ್ರಾಪ್ತ ಬಾಲಕರು ಇರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಸ್ಥಳೀಯರು ಮಧ್ಯರಾತ್ರಿ ಸಂಶಯಾಸ್ಪದವಾಗಿ ನಡೆದಿರುವ ಈ ಅವಘಡದ ಹಿಂದಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಬಂಟ್ವಾಳ ಪೊಲೀಸರಿಗೆ ಆಗ್ರಹಿಸಿದ ಹಿನ್ನಲೆಯಲ್ಲಿ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News