ಜ.17: ಮೂಡುಬಿದಿರೆಯಲ್ಲಿ ಹಕ್ಕುಪತ್ರ ವಿತರಣೆ

Update: 2025-01-14 13:41 GMT

ಮೂಡುಬಿದಿರೆ: ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 94 ಸಿ ಮತ್ತು 94 ಸಿಸಿ ಯಡಿ ಬಡವರಿಗೆ ಹಕ್ಕು ಪತ್ರ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಇದೀಗ ಮೂಡುಬಿದಿರೆ ತಾಲೂಕಿನ ಸುಮಾರು 300 ರಷ್ಟು ಅರ್ಹ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಯ ಡಿ ಹಕ್ಕು ಪತ್ರಗಳನ್ನು ಜ 17 ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿತರಿಸಲಿದ್ದಾರೆ ಎಂದು ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಕೆಪಿ ಸಿಸಿ ಸದಸ್ಯ ಮಿಥುನ್ ರೈ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಮಿಥುನ್ ರೈ ಅವರು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರು ದಲಿತರಿಗೆ ಹಕ್ಕು ಪತ್ರ ನೀಡಿಲ್ಲ. ಇದೀಗ ಪುರಸಭೆ ಸದಸ್ಯರು ಪಂಚಾಯತ್ ಸದಸ್ಯರ ಪರಿಶ್ರಮದಿಂದ ಅರ್ಹ ಫಲಾನುಭ ವಿಗಳನ್ನು ರಾಜಕೀಯ ರಹಿತವಾಗಿ ಗುರುತಿಸಲಾಗಿದೆ. ಹಕ್ಕುಪತ್ರ ವಿತರಣೆ ಸರ್ಕಾರದ ಕಾಯ೯ಕ್ರಮ ಹೊರತು ನಮ್ಮ ಮನೆಯ ಕಾಯ೯ಕ್ರಮವಲ್ಲ. ಆದ್ದರಿಂದ ಶಾಸಕರು ಬೇರೆ ಯಾವುದೇ ಕಾಯ೯ಕ್ರಮವಿದ್ದರೂ ಅದನ್ನು ಬದಿಗೊತ್ತಿ ಈ ಕಾಯ೯ಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಅಕ್ರಮಗಳಿಗೆ ಕಾಂಗ್ರೆಸ್ ತಡೆಯೊಡ್ಡಿದೆ ಹೊರತು ಅಭಿವೃದ್ಧಿ ಕಾಯ೯ಗಳಿಗೆ ಅಲ್ಲ: ಕಳೆದ 2023ರಲ್ಲಿ ವಾಲ್ಪಾಡಿ ಗ್ರಾಮವೊಂದರಲ್ಲೇ 50 ಫಲಾನುಭವಿಗಳನ್ನು ಕೈ ಬಿಡಲಾಗಿತ್ತು ಎಂದು ಆರೋಪಿಸಿದ ಅವರು ನಾವು ಹಕ್ಕುಪತ್ರ ನೀಡುವಲ್ಲಿ ಅಥವಾ ಅಭಿವೃದ್ಧಿ ಕಾಯ೯ಗಳಿಗೆ ಎಂದೂ ತಡೆಯೊಡ್ಡಿಲ್ಲ ಮತ್ತು ರಾಜಕಾರಣ ಮಾಡಿಲ್ಲ. ಆದರೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟಕ್ಕೆ ತಡೆಯೊಡ್ಡಿದ್ದೇವೆ ಇದರಿಂದಾಗಿ ಶಾಸಕರಿಗೆ ಬೇಸರ ಆಗಿರಬಹುದು ಎಂದರು.

ರಾಜ್ಯ ಸರ್ಕಾರದಿಂದ ಕೋಟಿ ಕೋಟಿ ಹಣ ಅನುದಾನ- ವಿದ್ಯಾಗಿರಿ ಜಂಕ್ಷನ್ ನಿಂದ ಸಂಪಿಗೆ ತನಕದ ರಸ್ತೆಯ ಅಗಲೀಕರಣಕ್ಕೆ ಈಗಾಗಲೇ ರಾಜ್ಯ ಸರ್ಕಾರ 10 ಕೋಟಿ ಹಣವನ್ನು ಅನುದಾನವಾಗಿ ನೀಡಿರುತ್ತದೆ. ಪುತ್ತಿಗೆ ದೇವಾಲಯದ ಎದುರಿನ ಅಗಲ ಕಿರಿದಾದ ಸೇತುವೆಯನ್ನು ಅಗಲಗೊಳಿಸಲು ಕೂಡ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಸೂರಿಂಜೆಯ ರಸ್ತೆಯ ಅಗಲೀಕರಣಕ್ಕೂ ಸರಕಾರ ಅನುದಾನ ನೀಡಿದೆ. ಪ್ರತಿ ಶಾಸಕರಿಗೂ ಹತ್ತು ಕೋಟಿ ಅನುದಾನವನ್ನು ನೀಡುವ ವಾಗ್ದಾನವನ್ನು ಸರಕಾರ ಮಾಡಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ. ಸಾಕಷ್ಟು ಅನುದಾನ ಎಲ್ಲ ಕ್ಷೇತ್ರದ ಶಾಸಕರಿಗೂ ದೊರಕುತ್ತಿದೆ ಎಂದರು.

ನಾನು ಅಸಹಾಯಕ ಎನ್ನುವ ಹೇಳಿಕೆ ನೀಡುತ್ತಿರುವ ಶಾಸಕರ ಬಗ್ಗೆ ನಮಗೂ ಬೇಸರವಿದೆ. ನಿಜವಾಗಿಯೂ ಅವರು ಅಸಹಾಯಕರಾಗಿದ್ದು ಅವರ ಸರಕಾರವಿದ್ದ ಸಮಯದಲ್ಲಿ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲರಾಗಿದ್ದರು ಎಂದರು.

ಉಮಾನಾಥ ಕೋಟ್ಯಾನ್ ಅವರನ್ನು ಕಡೆಗಣಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಯ ಚಂದ್ರ ಜೈನ್ ಹಿಂದೆ ತಾನು ಶಾಸಕನಾಗಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿಟಿ ರವಿ ಹಕ್ಕುಪತ್ರ ವಿತರಿಸಿದ್ದರು. ತನ್ನ ಮತ್ತು ಮಿಥುನ್ ರೈ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸವನ್ನು ಶಾಸಕರು ಇದೀಗ ಮಾಡುತ್ತಿದ್ದಾರೆ. ನನ್ನ ಮತ್ತು ಮಿಥುನ್ ರೈ ಯವರ ನಡುವೆ ಯಾವುದೇ ಮನಸ್ತಾಪವಿಲ್ಲ. ನಾವಿಬ್ಬರೂ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದೇವೆ. ಈ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿಲ್ಲ ಕಾಂಗ್ರೆಸ್ ಯಾವತ್ತೂ ಬಿಡುವುದಿಲ್ಲ. ರಾಜಕೀಯ ಮಾಡದೆ ಸಾಮಾನ್ಯರಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ನಂಬಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯ ವರ್ತಕರ ಮೇಲೆ ಗೂಂಡಾ ಗಿರಿ:- ಸ್ವರಾಜ್ಯ ಮೈದಾನದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಸಾಮಾನ್ಯರ ಕಿಸೆಯಿಂದಲೇ ಇತ್ತೀಚೆಗೆ ಹಣವನ್ನು ಗೂಂಡಾಗಳು ಎಗರಿಸಿಕೊಂಡು ಹೋಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಸೀಯಾಳ ಇತ್ಯಾದಿ ಮಾರಾಟಗಾರರಿಂದ ರೂಪಾಯಿ 130ಕ್ಕೆ ಬದಲು ರೂಪಾಯಿ 600, 800 ಗಳನ್ನು ವ್ಯಾಪಾರಿಗಳ ಕೆಸೆಯಿಂದ ಗೂಂಡಾ ವರ್ತನೆಯಲ್ಲಿ ಎಗರಿಸಿಕೊಂಡು ಹೋಗಿದ್ದಾರೆ. ಶಾಸಕರ ಒತ್ತಡದಿಂದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ ಎಂದು ತಿಳಿಸಿದರು. ವ್ಯಾಪಾರಿಗಳಿಗೆ ನಾವು ಗೂಂಡಾ ಸಂಸ್ಕೃತಿ ಯನ್ನು ವಿರೋಧಿಸುವಂತೆ ಈಗಾಗಲೇ ನೈತಿಕ ಬಲವನ್ನು ನೀಡಿರುತ್ತೇವೆ ಇದು ಇನ್ನೂ ಮುಂದುವರಿದಲ್ಲಿ ಇತರ ಕ್ರಮ ಕೈಗೊಳ್ಳಬೇಕಾಗುವುದೆಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್, ಮುಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಸುರೇಶ್ ಪ್ರಭು, ಜೊಸ್ಸಿ ಮಿನೋಜಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News