ಎಸೆಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ವಿಡಿಯೊ ಸಂವಾದ

Update: 2024-03-06 09:07 GMT

ಮಂಗಳೂರು, ಮಾ.6: ರಾಜ್ಯದಾದ್ಯಂತ ಮಾ. 25ರಿಂದ ಎಪ್ರಿಲ್ 6ರವರೆಗೆ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಿ ಉತ್ತಮ ಅಂಕಗಳಿಸುವಂತೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರೋತ್ಸಾಹಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಜೊತೆ ಬುಧವಾರ ತಮ್ಮ ಕಚೇರಿಯಿಂದ ವಿಡಿಯೋ ಸಂವಾದ ನಡೆಸಿ ಅವರು ಶುಭ ಹಾರೈಸಿದರು.

ಎಸೆಸೆಲ್ಸಿ ಮಹತ್ವದ ಪರೀಕ್ಷೆಯಾಗಿದ್ದು, ಇದನ್ನು ಎದುರಿಸಲು ವಿದ್ಯಾರ್ಥಿಗಳು ಉತ್ತಮ ಮನಸ್ಥಿತಿಯನ್ನು ಹೊಂದಿರಬೇಕು. ಮಾನಸಿಕ ಶಾಂತತೆಯ ಜತೆಗೆ ಶಿಸ್ತು, ಆತ್ಮವಿಶ್ವಾಸ ಅತ್ಯಂತ ಮುಖ್ಯ. ಯಾವುದೇ ಕಾರಣಕ್ಕೂ ವಿಚಲಿತರಾಗದೆ, ಮನಸಿಟ್ಟು ಓದಿದರೆ, ಶಿಸ್ತಿನ ಸಮಯ ಪಾಲನೆಯಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುವುದು. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಚಾಂಪಿಯನ್‌ಗಳಾಗಿ ಹೊರ ಹೊಮ್ಮಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಆಲೋಚನೆ ಮಾಡಿಕೊಂಡು ಆತಂಕ, ವಿಷಾದಭಾವಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು. ಪರೀಕ್ಷೆಗೆ 19 ದಿನಗಳು ಮಾತ್ರ ಉಳಿದಿದ್ದು, ಇದೀಗ ಓದಿನಲ್ಲಿ ನೀವು ಎಲ್ಲಿದ್ದೀರಿ, ಎಂಬುದನ್ನು ಚಿಂತಿಸಿ ಆ ಮೂಲಕ ಓದದೆ ಇರುವ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಪೂರ್ವ ತಯಾರಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯ ತುಂಬಾ ಕಷ್ಟವಾಗಿತ್ತೆಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕಷ್ಟದ ಸಂಗತಿಗಳು, ಫಾರ್ಮುಲಾಗಳು, ಟೆಕ್ನಿಕಲ್ ಮಾಹಿತಿಗಳನ್ನು ಒಂದು ಹಾಳೆಯಲ್ಲಿ ಬರೆದು ಅದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ನೆರವಿಗೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸಿದ್ಧವಿದೆ ಎಂದರು.

ಪರೀಕ್ಷೆಯಲ್ಲಿ ಸಮಯ ಪಾಲನೆ ಹೇಗೆ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, 80 ಅಂಕಗಳ ಪರೀಕ್ಷೆಯಲ್ಲಿ ಮೊದಲ 10 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಕೂಲಂಕುಶವಾಗಿ ಓದಿ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಕೊನೆಯ 10 ನಿಮಿಷಗಳನ್ನು ಬರೆದಿರುವ ಉತ್ತರಗಳನ್ನು ಪರೀಕ್ಷಿಸಿ ಕೊಳ್ಳಲು ಮೀಸಲಿರಿಸಿಕೊಳ್ಳಬೇಕು. ಈ ಮಧ್ಯದಲ್ಲಿ ಸಿಗುವ ವೇಳೆಯನ್ನು ಎರಡು, ಐದು ಅಥವಾ ಇತರೆ ಅಂಕಗಳಿಗೆ ಎಷ್ಟು ಪ್ರಮಾಣದಲ್ಲಿ ಬರೆಯಲು ಕಾಲಾವಕಾಶ ನೀಡಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಬೇಕು. ನೋಡಿದ ಕೂಡಲೇ ಬರೆಯುವುದಕ್ಕಿಂತ ಮುಂಚೆ 10 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಓದಿದ ನಂತರವೇ ಸಮಯ ಅವಕಾಶವನ್ನು ಹೊಂದಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ್, ಎಸೆಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿ ವೆಂಕಟೇಶ್ ನಾಯಕ್, ಸೌಮ್ಯ ಉಪಸ್ಥಿತರಿದ್ದರು.

ಜಿಲ್ಲೆಯ ಹಲವು ಶಾಲೆಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News