ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

Update: 2024-09-06 13:24 GMT

ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದಿರುವ ಆರೋಪಕ್ಕೆ ಸಂಬಂಧಿಸಿ ಇದೀಗ ಸಂತ್ರಸ್ತೆ ಎನ್ನಲಾದ ಮಹಿಳೆಯು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ತಾನು ದೂರು ನೀಡಿದಂತೆ ಕೇಸು ದಾಖಲಿಸಿಕೊಳ್ಳಲಿಲ್ಲ ಎಂದು ಪೊಲೀಸರ ವಿರುದ್ಧವೂ ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆಯ ದೂರಿನಂತೆ ಲೈಂಗಿಕ ದೌರ್ಜನ್ಯ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕೇಸು ದಾಖಲಿಸಲಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಮಹಿಳೆ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಆ ಬಳಿಕ ಆರೋಪಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಅತ್ಯಾಚಾರ ಪ್ರಕರಣ (ಐಪಿಸಿ 376) ಸೇರ್ಪಡೆಗೊಳಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.

ಮಹಿಳೆಯ ದೂರಿನಂತೆ ತನಿಖೆ ನಡೆಸಿದ್ದ ಪುತ್ತೂರು ನಗರ ಠಾಣೆ ಇನ್ ಸ್ಪೆಕ್ಟರ್ ಸತೀಶ್ ಜಿ ಜೆ ಅವರ ನೇತೃತ್ವದಲ್ಲಿ ಸೆ.3ರಂದು ಬೆಂಗಳೂರಿನ ಹೊಟೇಲೊಂದರಲ್ಲಿ ಮಹಜರು ನಡೆಸಿದ್ದರು. ಸಂತ್ರಸ್ತ ಮಹಿಳೆಯನ್ನು ಸೆ.2ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಳಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆಕೆಯ ಹೇಳಿಕೆ ಪಡೆದುಕೊಳ್ಳಲಾಗಿತ್ತು.

ಇದೀಗ ಮಹಿಳೆಯು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿರುವ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ತಾನು ದೂರು ನೀಡಲು ಆ.30ರಂದು ಪುತ್ತೂರು ಠಾಣೆಗೆ ಹೋದಾಗ ಪೊಲೀಸರು ತನ್ನ ದೂರನ್ನು ಸ್ವೀಕರಿಸದೆ 3 ದಿನಗಳ ಕಾಲ ಕಾಯಿಸಿದ್ದಾರೆ. ಈ ಬಗ್ಗೆ ನಾನು ಪುತ್ತೂರು ಮಹಿಳಾ ಠಾಣೆಯಲ್ಲಿ ಸೆ. 1ರಂದು ಧರಣಿ ನಡೆಸಿದ ಬಳಿಕ ದೂರು ಸ್ವೀಕರಿಸಿದ್ದಾರೆ. ನಾನು ನೀಡಿರುವ ಅತ್ಯಾಚಾರ ದೂರನ್ನು ಬದಲಾಯಿಸಿ ಆರೋಪಿಗೆ ಜಾಮೀನು ಸಿಗಬಹುದಾದ ಕಲಂ ಬರುವಂತಹ ದೂರು ದಾಖಲಿಸಿ ಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News