ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಸಚಿವ ದಿನೇಶ್ ಗುಂಡೂರಾವ್

Update: 2023-10-18 17:02 GMT

ಮಂಗಳೂರು, ಅ.18: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಸಮಗ್ರ ಆರೋಗ್ಯ ರಕ್ಷಣಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿ ಸಲು ಆದ್ಯತೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಇನ್ನಷ್ಟು ಬಲಪಡಿಸಿ, ರೋಗಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗು ವುದು. ಹೊರ ರೋಗಿ ವಿಭಾಗವನ್ನು ನವೀಕರಿಸಲು ಅಥವಾ ಪುನರ್ ನಿರ್ಮಾಣ ಮಾಡಲು ಯೋಚಿಸಲಾಗಿದೆ ಎಂದ ಸಚಿವ ದಿನೇಶ್ ಗುಂಡೂರಾವ್ ಕೆಎಂಸಿ ಆಸ್ಪತ್ರೆಯು ಹೊಸ ಒಪಿಡಿ ಕಟ್ಟಡ ನಿರ್ಮಿಸಲು ಮುಂದೆ ಬರಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುವುದು. ಈಗಾಗಲೇ ರಾಜ್ಯ ಸರಕಾರವು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಿರ್ವಹಣೆ ಟೆಂಡರ್ ಕರೆದಿದ್ದು, ಶೀಘ್ರ ಏಜೆನ್ಸಿ ಅಂತಿಮಗೊಳಿಸಲಾಗು ವುದು. ವೆನ್ಲಾಕ್ ಆಸ್ಪತ್ರೆಗೆ 13 ಹೊಸ ಡಯಾಲಿಸಿಸ್ ಯಂತ್ರ ನೀಡಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ನಿರ್ವಹಣೆಗೆ ಪೂರಕ ಸಿಬ್ಬಂದಿಯನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವೆನ್ಲಾಕ್ ಆಸ್ಪತ್ರೆಯ ಮಧ್ಯದಲ್ಲಿ ಹಾದು ಹೋಗಿರುವ ರೈಲ್ವೆ ಸ್ಟೇಷನ್ ರಸ್ತೆಯನ್ನು ಸಾರ್ವಜನಿಕ ಬಳಕೆಯಿಂದ ಮುಕ್ತ ಗೊಳಿಸಿ ವೆನ್ಲಾಕ್ ಆವರಣದ ಅಭಿವೃದ್ಧಿಗೆ ಬಳಸಲು ಚಿಂತಿಸಲಾಗಿದೆ. ಈ ರಸ್ತೆ ಬದಲು ಸಾರ್ವಜನಿಕರಿಗೆ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಈ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ.ಆನಂದ್ ಕೆ., ಜಿಲ್ಲಾ ಆರೋಗ್ಯಧಿಕಾರಿ ಡಾ.ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ್ ಉಪಸ್ಥಿತರಿದ್ದರು.

ಸಭೆಗೂ ಮುನ್ನ ಸಚಿವ ದಿನೇಶ್ ಗುಂಡೂರಾವ್ ವೆನ್ಲಾಕ್ ಆಸ್ಪತ್ರೆಯ ಐಸಿಯು ಘಟಕ, ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ಡಯಾಲಿಸಿಸ್ ಕೇಂದ್ರ, ಪ್ರಯೋಗಾಲಯ ಸಹಿತ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News