ಸೋಶಿಯಲ್ ಮೀಡಿಯಾದಲ್ಲಿ ಗೀಚುವವರು ಗ್ಯಾಸ್ ಕಂಪೆನಿಯಿಂದ ಹೆಚ್ಚುವರಿ ಪರಿಹಾರ ಕೊಡಿಸುವ ಜವಾಬ್ದಾರಿ ವಹಿಸಲಿ: ಎನ್.ಎಸ್ ಕರೀಮ್
ಮಂಗಳೂರು: ಮಂಜನಾಡಿಯಲ್ಲಿ ನಡೆದ ಅಡುಗೆ ಅನಿಲ ದುರಂತಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಗೀಚುವವರು ಬದುಕುಳಿದ ವಿದ್ಯಾರ್ಥಿನಿಯ ಮುಂದಿನ ಚಿಕಿತ್ಸೆ ಹಾಗೂ ಗ್ಯಾಸ್ ಕಂಪೆನಿಯಿಂದ ಹೆಚ್ಚುವರಿ ಪರಿಹಾರ ಕೊಡಿಸುವ ಜವಾಬ್ದಾರಿ ವಹಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಎನ್ ಎಸ್ ಕರೀಮ್ ಅವರು ತಿಳಿಸಿದ್ದಾರೆ.
ಮಂಜನಾಡಿ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಮುಂದಾಗಬೇಕು ಎಂದು ಘಟನಾ ಸ್ಥಳಕ್ಕೆ ಇದುವರೆಗೆ ಬಾರದ, ಸಂತ್ರಸ್ತರನ್ನು ಭೇಟಿ ಮಾಡದ ಕಮ್ಯುನಿಸ್ಟ್ ಮುಖಂಡ ಮುನೀರ್ ಕಾಟಿಪಳ್ಳ ಹೇಳಿಕೆ ನೀಡಿದ್ದಾರೆ. ಅದೂ ಅಲ್ಲದೇ ಈ ಪ್ರಕರಣದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಿತ್ತು ಎಂಬ ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದಾರೆ. ಹೌದು. ನಮಗೆ ಅನುಭವ ಇಲ್ಲ, ಜವಾಬ್ದಾರಿ ಇಲ್ಲ, ನಿಮ್ಮಷ್ಟು ಬುದ್ಧಿವಂತರೂ ನಾವಲ್ಲ. ಆದರೂ ನಾವು ಆರಂಭದ ದಿನದಿಂದಲೂ ಸಂತ್ರಸ್ತ ಕುಟುಂಬದ ಜೊತೆ ನಿಂತು ನಮಗೆ ಎಷ್ಟು ಸಾಧ್ಯವಿದೆಯೋ ಆ ಕೆಲಸವನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸಿದ್ದೇವೆ. ಹೆಚ್ಚು ಅನುಭವವಿರುವ, ಜವಾಬ್ದಾರಿಯಿರುವ, ಬುದ್ಧಿಜೀವಿಗಳಾದ ತಮ್ಮಿಂದ ಈ ನೊಂದ ಕುಟುಂಬಕ್ಕೆ ಹೆಚ್ಚಿನ ಪ್ರಯೋಜನವಾಗುವುದಾದರೆ ನಮಗೆ ಸಂತೋಷ. ಗಂಭೀರ ಗಾಯಗೊಂಡಿದ್ದ 4 ಜನರ ಪೈಕಿ ಕೇವಲ ಒಂದು ಮಗು ಮಾತ್ರ ಬದುಕಿ ಬಂದಿದೆ. ಬದುಕಿ ಉಳಿದಿರುವ ಮಗುವಿನ ಚಿಕಿತ್ಸೆ ಹಾಗೂ ಕುಟುಂಬದ ಜವಾಬ್ದಾರಿಯನ್ನು ಮುನೀರ್ ಹಾಗೂ ಅವರ ಕೂಟ ವಹಿಸಿಕೊಂಡು ತಮ್ಮ ಪ್ರಮಾಣಿಕತೆ, ಜವಾಬ್ದಾರಿ ಮತ್ತು ಬದ್ಧತೆಯನ್ನು ತೋರಿಸಲಿ ಎಂದು ಎನ್ ಎಸ್ ಕರೀಮ್ ಹೇಳಿದ್ದಾರೆ.
ಮಂಜನಾಡಿಯ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಗ್ಯಾಸ್ ಕಂಪೆನಿಯಿಂದ ಇನ್ನೂ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಯಾವ ರೀತಿಯ ತನಿಖೆ ಬೇಕು, ಅದನ್ನು ಯಾರಿಂದ ಮಾಡಿಸಬೇಕು ಎಂದು ಮುನೀರ್ ಅವರೇ ಕುಟುಂಬದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸಬೇಕು. ಅದಕ್ಕೆ ನಮ್ಮೆಲ್ಲರ ಸಹಕಾರವಿದೆ. ಅಂತಹ ತನಿಖಾ ವರದಿಯಿಂದ ಈಗ ಗ್ಯಾಸ್ ಕಂಪೆನಿ ಕೊಡಲು ಮುಂದಾಗಿರುವ ಪರಿಹಾರಕ್ಕೆ ತಡೆಯಾದರೆ ಮುನೀರ್ ಅವರೇ ಈ ಪರಿಹಾರದ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ಕೊಡಬೇಕು ಎಂದು ವಿನಯ ಪೂರ್ವಕವಾಗಿ ಈ ಮೂಲಕ ಒತ್ತಾಯಿಸುತ್ತೇವೆ ಎಂದು ಎನ್ ಎಸ್ ಕರೀಮ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.