ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿಯ ಮೃತದೇಹ ಪತ್ತೆ
ಮಂಗಳೂರು, ಅ.30: ರಾ.ಹೆ.66ರ ಉಳ್ಳಾಲದ ಸೇತುವೆಯಿಂದ ಸೋಮವಾರ ಮಧ್ಯಾಹ್ನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಮಗಳೂರು ಮೂಲದ ವ್ಯಾಪಾರಿಯ ಮೃತದೇಹ ಸಂಜೆಯ ವೇಳೆಗೆ ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಭೈರಪುರ ಕಾರ್ತಿಕೆರೆ ಗೋಕುಲ್ ಫಾರ್ಮ್ ಮುಗುಲವಳ್ಳಿ ನಿವಾಸಿ ಶಂಕರೇಗೌಡ ಅವರ ಪುತ್ರ ಪ್ರಸನ್ನ ಬಿ.ಎಸ್. (37) ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿಯಾಗಿದ್ದಾರೆ. ಇವರು ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಪತ್ತೆಯಾದ ಚಾಲನಾ ಪರವಾನಿಗೆಯ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿತ್ತು. ಅಲ್ಲದೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು.
ಪ್ರಸನ್ನ ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ತರುತ್ತಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಕೊತ್ತಂಬರಿ ಸೊಪ್ಪು ತಂದು ಮಾರುಕಟ್ಟೆಗೆ ಹಾಕಿ ಬಳಿಕ ತನ್ನ ಕಾರಿನಲ್ಲಿ ಹೊರಟಿದ್ದಾರೆ. ಮಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನೀರಿಗೆ ಹಾರಿದ ಬಳಿಕ ತೇಲುತ್ತಾ ಹೋಗುವ ದೃಶ್ಯವನ್ನು ಅದೇ ದಾರಿಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಚಿತ್ರೀಕರಣ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯ ವೈರಲ್ ಆಗಿದೆ. ಸಂಜೆಯ ವೇಳೆಗೆ ಪ್ರಸನ್ನ ಅವರ ಮೃತದೇಹ ಪತ್ತೆಯಾಗಿದೆ. ಪ್ರಸನ್ನ ಅವರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ಧಾರ್ಥ 2019ರಲ್ಲಿ ನೇತ್ರಾವತಿ ಸೇತುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸೇತುವೆಗೆ ತಡೆಬೇಲಿ ಅಳವಡಿಸಲು ಜನಪ್ರತಿನಿಧಿಗಳು ಮುಂದಾದರು. ಹಾಗೇ 2020ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆತ್ಮಹತ್ಯೆ ತಡೆಗಾಗಿ ತಡೆಬೇಲಿಯನ್ನು ಅಳವಡಿಸಲಾಗಿತ್ತು. ಆ ಬಳಿಕ ಆತ್ಮಹತ್ಯೆ ಪ್ರಕರಣಗಳಿಗೆ ತಡೆ ಬಿದ್ದಿತ್ತು.
ಸೋಮವಾರ ಚಿಕ್ಕಮಗಳೂರಿನ ವ್ಯಾಪಾರಿ ತನ್ನ ಕಾರನ್ನು ಸೇತುವೆ ಬಳಿ ನಿಲ್ಲಿಸಿ ತಡೆಬೇಲಿ ಇಲ್ಲದ, ಸೇತುವೆಯ ಆರಂಭದ ಸ್ಥಳದಲ್ಲೇ ನದಿಗೆ ಹಾರಿದ್ದು, ನೇತ್ರಾವತಿ ಸೇತುವೆ ಮತ್ತೆ ಸುದ್ದಿಯಲ್ಲಿದೆ.