ಫಿಸಿಯೋಥೆರಪಿಸ್ಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ : ಬಸವರಾಜ ಹೊರಟ್ಟಿ

Update: 2023-09-09 16:03 GMT

ಮಂಗಳೂರು, ಸೆ.9: ಆರೋಗ್ಯ ವೃದ್ಧಿಗೆ ಫಿಸಿಯೋಥೆರಪಿ ಅಗತ್ಯ. ವೈದ್ಯರಷ್ಟೇ ಪ್ರಾಮುಖ್ಯತೆ ಇವತ್ತಿನ ದಿನಗಳಲ್ಲಿ ಫಿಸಿಯೋಥೆರಪಿಸ್ಟ್‌ಗಳಿಗೆ ಇದೆ. ಪ್ರತಿಯೊಂದು ಶಸ್ತ್ರಚಿಕಿತ್ಸೆಯ ಬಳಿಕ ಫಿಸಿಯೋಥೆರಪಿಗೆ ವೈದ್ಯರು ಸಲಹೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಇದರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸೌತ್ ಕೆನರಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಆಶ್ರಯದಲ್ಲಿ ನಗರದ ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಎರಡು ದಿನಗಳ ‘ಮಂಗಳೂರು ಫಿಸಿಯೋಕಾನ್ ಅಂತರ್‌ರಾಷ್ಟ್ರೀಯ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಫಿಸಿಯೋಥೆರಪಿ ನೆರವು ಪಡೆದ ಕಾರಣದಿಂದಾಗಿ ತಮಗೆ ಯಾವುದೇ ಸಮಸ್ಯೆಯಿಲ್ಲದೆ ನಡೆದಾಡಲು ಸಾಧ್ಯವಾಗುತ್ತಿದೆ. ಫಿಟ್‌ನೆಸ್ ಸಮಸ್ಯೆ ಇಲ್ಲ ಎಂದರು.

ಫಿಸಿಯೋಥೆರಪಿಗೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ( ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಪ್ರೊಫೆಶನ್ಸ್ ಆ್ಯಕ್ಟ್ )2021ನ್ನು ರಾಜ್ಯದಲ್ಲಿ ಜಾರಿಗೆ ಪ್ರಯತ್ನ ನಡೆಯುತ್ತಿದೆ. ಇದು ಅವಿರೋಧವಾಗಿ ಜಾರಿಯಾಗುವಂತೆ ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಹೊರಟ್ಟಿ ನುಡಿದರು.

ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ. ರಿಯಾಝ್ ಬಾಷಾ ಎಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.‌ ತೇಜಸ್ವಿನಿ ಸಮೂಹ ಕಾಲೇಜುಗಳು ಸ್ಥಾಪಕಾಧ್ಯಕ್ಷ ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ಮಂಗಳೂರು ಎಲ್ಲ ರಂಗಗಳಲ್ಲೂ ಮುನ್ನಡೆದಿದೆ. ಇಲ್ಲಿ ಫಿಸಿಯೋಥೆರಪಿ ಶಿಕ್ಷಣ ಪಡೆದವರು ದೇಶದ ಎಲ್ಲಡೆ ಇದ್ದಾರೆ ಎಂದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಿಂಗಾಪುರದ ಡಾ. ಸೆಂಗ್ ಕೀ ವೀ ತಮ್ಮ ಅನುಭವವನ್ನು ಹಂಚಿಕೊಂಡರು.

ಭಾರತೀಯ ಫಿಸಿಯೋಥೆರಪಿಸ್ಟ್‌ಗಳ ಸಂಘದ ಉಪಾಧ್ಯಕ್ಷ ಡಾ.ಸುರೇಶ್ ಬಾಬು ರೆಡ್ಡಿ, ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಕೆ.ವೆಂಕಟಗಿರಿ, ಸೆನೆಟ್ ಸದಸ್ಯರಾದ ಡಾ. ಸಾಯಿ ಕುಮಾರ್, ಡಾ.ಶಿವಶರಣ್ ಶೆಟ್ಟಿ, ಡಾ.ಶರಣ್ ಶೆಟ್ಟಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಗಳೂರು ಫಿಸಿಕಾನ್ 2023 ಇದರ ಸಂಘಟನಾ ಅಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಅಲಿ ಉಪಸ್ಥಿತರಿದ್ದರು. ಫಿಸಿಯೋಕಾನ್ ಅಂತರ್‌ರಾಷ್ಟ್ರೀಯ ಸಮ್ಮೇಳನ’ದ ಜೊತೆ ಕಾರ್ಯದರ್ಶಿ ಡಾ. ಸಜಿತ್ ರಘನಾಥನ್ ಸ್ವಾಗತಿಸಿದರು. ಸಂಯೋಜಕಿ ಡಾ.ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News